Breathe - into the shadows

Breathe - Into the shadows ಇದು ಅಮೆಝಾನ್ ಪ್ರೈಮ್ ನಲ್ಲಿ ಬಿತ್ತರವಾಗುತ್ತಿರುವ ಧಾರವಾಹಿ.

ಮೊದಲೆರಡು ಕಂತುಗಳನ್ನು ನೋಡಿ ನನಗೆ ತುಂಬಾ ಚೆನ್ನಾಗಿದೆ ಅನಿಸಿತ್ತು. ಆಮೇಲೆ ಕಥೆಯು ದುರ್ಬಲವಾಗುತ್ತಾ ಹೋಯಿತು.

ಅವಿನಾಶ್ ಒಬ್ಬ ಪ್ರಸಿದ್ಧ ಸೈಕಿಯಾಟ್ರಿಸ್ಟ್.. ಅವನ ಹೆಂಡತಿ ಆಭಾ ಫೈವ್ ಸ್ಟಾರ್ ಹೋಟೆಲಲ್ಲಿ ಶೆಫ್. ಮುದ್ದಾದ ಮಗಳು ಸಿಯಾ , ಸುಂದರ, ವಿಶಾಲ ಮನೆ. ಸುಖಿ ಜೀವನ ನಡೆಸುತ್ತಿದ್ದಾನೆ ಅವಿ.

ಆದರೆ ಒಂದು ದಿನ ಅವನ ಬದುಕು ತಲೆಕೆಳಗಾಗಿಬಿಡುತ್ತದೆ. ಗೆಳೆಯರ ಮಗುವಿನ ಹುಟ್ಟುಹಬ್ಬಕ್ಕೆ ಮಗಳನ್ನು ಬಿಟ್ಟು, ತಾನು ಅಲ್ಲೇ ಪಕ್ಕದ ಹೋಟೆಲಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾಗ -

ನಮ್ಮ ಖಳನಾಯಕ ಬರುತ್ತಾನೆ. ಕಾಲು ಎಳೆಯುತ್ತ. ಬಂದು ಮಗುವನ್ನು ಕಿಡ್ನಾಪ್ ಮಾಡಿಕೊಂಡು ಹೊರಟುಹೋಗುತ್ತಾನೆ.

ಅವಿನಾಶ್, ಅಭಾ ಊರೆಲ್ಲ ಹುಡುಕುತ್ತಾರೆ. ಪೊಲೀಸ್ ಕಂಪ್ಲೇಂಟ್ ಕೊಡುತ್ತಾರೆ. ಪೊಲೀಸರು ಬಹಳ ಹುಡುಕುತ್ತಾರೆ. ಆಭಾ ರಸ್ತೆ ರಸ್ತೆಗಳಲ್ಲಿ ಪೋಸ್ಟರ್ ಅಂಟಿಸುತ್ತಾಳೆ. ಆದರೂ ಸಿಯಾನ  ಪತ್ತೆಯಿಲ್ಲ.

ಒಂಬತ್ತು ತಿಂಗಳ ನಂತರ ಅವರ ಮನೆಗೆ ಒಂದು ಪಾರ್ಸಲ್ ಬರುತ್ತದೆ. ಅದರಲ್ಲಿ ಒಂದು ಐಪ್ಯಾಡ್ .
 ಅದರಲ್ಲೊಂದು ವಿಡಿಯೋ. ಸಿಯಾ ಮತ್ತು ಅವಳ ಜೊತೆ ಇನ್ನೊಬ್ಬ ಕಿಡ್ನಾಪ್ ಆಗಿರುವ ಯುವತಿ ಮಾತಾಡುವ, ಆಟ ಆಡುವ, ಸಿಯಾಗೆ ಆ ಯುವತಿ (ಅವಳು ಮೆಡಿಕಲ್ ಸ್ಟೂಡೆಂಟ್) ಡಯಾಬಿಟಿಸ್ ಇಂಜೆಕ್ಷನ್ ಕೊಡುವ ವಿಡಿಯೋಗಳು.

ಇನ್ನೊಂದು ವಿಡಿಯೋದಲ್ಲಿ ನಮ್ಮ ಖಳನಾಯಕ - ಮುಖಕ್ಕೆ ಮಾಸ್ಕ ಹಾಕಿಕೊಂಡು ಹೇಳುತ್ತಾನೆ. ನಿನ್ನ ಮಗಳು ನಿನಗೆ ಬೇಕಾದರೆ ನೀನು ಒಂದು ಕೊಲೆ ಮಾಡಬೇಕು.

ಆ ಕೊಲೆಯಾಗಬೇಕಾದ ವ್ಯಕ್ತಿಯ ಫೋಟೋ ಮತ್ತು ಅಡ್ರೆಸ್ ಕೂಡ ಪಾರ್ಸೆಲ್ನಲ್ಲಿದೆ.

ನಮ್ಮ ಪುಟ್ಟ ಸಿಯಾ ಮಧುಮೇಹದ ರೋಗಿ - ಅವಳಿಗೆ ದಿನಕ್ಕೆ ಎರಡು ಸಲ ಇನ್ಸುಲಿನ್ ಇಂಜೆಕ್ಷನ್ ಕೊಡಬೇಕು. ಈ ಮಾಸ್ಕ್ ಧಾರಿ ಕಿಡ್ನಾಪರ್ ಒಂದು ಇನ್ಸುಲಿನ್ ಬಾಟಲಿ ತೋರಿಸಿ ಹೇಳುತ್ತಾನೆ. ಇದರಲ್ಲಿರುವ ಇನ್ಸುಲಿನ್ ಖಾಲಿ ಆಗುವದರೊಳಗಾಗಿ ಕೊಲೆ ಮಾಡಿ ಅದರ ವಿಡಿಯೋ ನನಗೆ ಕಳಿಸಿಕೊಡಬೇಕು.

ಇಲ್ಲಿ ಸ್ವಲ್ಪ ಫ್ಲಾಶ್ ಬ್ಯಾಕ್.

ಅವಿನಾಶ್ ತುಂಬಾ ದುರ್ದೈವಿ. ಅಪ್ಪ ಕುಡಿದು ಅಮ್ಮನಿಗೆ ಹೊಡೆಯುವದನ್ನು ನೋಡುತ್ತಾ ಪುಟ್ಟ ಅವಿ ಒಂದು ಮೂಲೆಯಲ್ಲಿ ಮುದುರಿ ಭಯದಿಂದ ಕುಳಿತಿರುತ್ತಿದ್ದ. ಒಂದು ದಿನ ಬಸ್ ಆಕ್ಸಿಡೆಂಟ್ನಲ್ಲಿ ಅಪ್ಪ, ಅಮ್ಮ ಇಬ್ಬರು ಸತ್ತು ಹೋಗುತ್ತಾರೆ. ಆವಿಯ ಕಾಲಿಗೆ ಪೆಟ್ಟಾಗುತ್ತದೆ.

ಅನಾಥ ಅವಿನಾಶನನ್ನು ಚಿಕ್ಕಪ್ಪಂದಿರು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಅವನಿಗೆ ಸ್ನೇಹಿತರಿಲ್ಲ. ಬಡಪಾಯಿ ಹುಡುಗನನ್ನು ಶಾಲೆಯ ಮಕ್ಕಳು ತುಂಬಾ ಕೀಟಲೆ ಮಾಡಿ ಸತಾಯಿಸುತ್ತಾರೆ.

ಆಗ ಅವಿನಾಶನ ಇನ್ನೊಂದು ರೂಪ ಹೊರ ಬರುತ್ತದೆ. ಅವನಿಗೆ multiple personality disorder. ಅವನ ಇನ್ನೊಂದು ವ್ಯಕ್ತಿತ್ವ ಜೆ  - ಒರಟು, ಹಿಂಸಾತ್ಮಕ. ಅವಿನಾಶ್ ಎಷ್ಟು ಶಾಂತನೋ ಜೆ ಅಷ್ಟೇ ಜಗಳಗಂಟ. ಅವನಿಗೆ ಕೀಟಲೆ ಕೊಡುವ ಹುಡುಗರ ಜೊತೆ ಹೊಡೆದಾಟ ಮಾಡಿ ಗಲಾಟೆ ಮಾಡುತ್ತಾನೆ.

ಈ ಗಲಾಟೆಗಳ ಸ್ವರೂಪ ನೋಡಿದ ಡಾಕ್ಟರ್, ಸೈಕಿಯಾಟ್ರಿಸ್ಟ್  ಕರೆದಾಗ ಈ ಡಿಸಾರ್ಡರ್ ಬಗ್ಗೆ ಗೊತ್ತಾಗುತ್ತದೆ. ಆದರೆ ಪ್ರಿನ್ಸಿಪಾಲ್ ಅವನ ಟ್ರೀಟ್ಮೆಂಟ್ ಮಾಡುವ ಬದಲು ಜೆ ಇರಲಿ - ಅವಿನಾಶ್ ರಕ್ಷಣೆಗೆ ಎಂದು ತೀರ್ಮಾನಿಸುತ್ತಾರೆ.

ಇದು ನನಗೆ ಅರ್ಥವಾಗದ ವಿಷಯ. ಅಷ್ಟು ವಯಲೆಂಟ್ ಆಗುತ್ತಾನೆ ಎಂದು ಗೊತ್ತಿದ್ದರೂ, ಟ್ರೀಟ್ಮೆಂಟ್ ಯಾಕೆ ಮಾಡಿಸುವದಿಲ್ಲ?

ಮೇಧಾವಿ ಅವಿನಾಶ್ ಮೆಡಿಕಲ್ ಕಾಲೇಜ್ ಸೇರಿ ಮುಂದೆ ಸೈಕಿಯಾಟ್ರಿ ನಲ್ಲಿ ಸ್ಪೆಷಲೈಜ್ ಮಾಡುತ್ತಾನೆ.

ಒಬ್ಬ ಮನೋ ವಿಜ್ಞಾನಿಗೆ ತನ್ನಲ್ಲಿರುವ ಇಂತಹ ಸಮಸ್ಯೆ ಗೊತ್ತ್ತಾಗುವದಿಲ್ಲವೇ ? ಸಂಶಯವೂ ಬರುವದಿಲ್ಲವೇ? ಅವನ ಹೆಂಡತಿ ಆಭಾ - ಅವಳಿಗೂ ಅವನ ನಡುವಳಿಕೆ ವಿಚಿತ್ರವೆನಿಸುವದಿಲ್ಲವೇ?

ಒಟ್ಟಿನಲ್ಲಿ ಬಹಳ ಆಭಾಸಗಳಿದ್ದರೂ ಧಾರವಾಹಿ ಪರವಾಗಿಲ್ಲ.

Comments

Popular posts from this blog

ಹೂಗಳು

ಎಮ್ಮೆ

Not for nation