ಪರೂಫ್
ನಮ್ಮ ಸರಕಾರ - ಪ್ರಜಾಪ್ರಭುತ್ವದ ಸರಕಾರ - ನಾವು ಚುನಾಯಿಸಿ ಆರಿಸಿ ಕಳಿಸಿರುವ ಸರಕಾರ - ಇರುವದು ನಮ್ಮ ಅನುಕೂಲಕ್ಕೋ, ಅನಾನುಕೂಲಕ್ಕೋ? ನಮಗೆ ಸಹಾಯ ಮಾಡಲೋ, ನಮಗೆ ಅಡಚಣೆ ಮಾಡಲೋ? ನಮ್ಮನ್ನು ರಕ್ಷಿಸಲೋ, ನಮ್ಮನ್ನು ಭಕ್ಷಿಸುಲೋ? ನೀವೇ ಹೇಳಿ, ಯಾಕೆಂದರೆ ನಾನಂತೂ ಪೂರ್ವಾಗ್ರಹ ಪೀಡಿತಳು. ನಮ್ಮ ಮನೆ, ೪೦ ವರ್ಷದಿಂದ ನಾವು ಬದುಕಿ ಬಾಳಿದ ಮನೆ, ನಮ್ಮ ಅಪ್ಪ-ಅಮ್ಮ ಬೆವರು ಸುರಿಸಿ ಕಟ್ಟಿಕೊಂಡ ಮನೆ, ನಮ್ಮದೆಂದು ಪ್ರೂಫ್ ಕೊಟ್ಟು ಅದರ ನೋಂದಣಿಯನ್ನು ಕಂಪ್ಯೂಟರಿನಲ್ಲಿ ಮಾಡಿಸಿಕೊಳ್ಳಬೇಕು. ಆದರೆ ನಿಮಗೆ ಹೇಗೆ "ಈ" ಖಾತೆ ಕೊಡಬೇಕು, ನಿಮ್ಮ ಮನೆಯ ಎದುರಿಗೆ ೫೦ ಅಡಿ ರಸ್ತೆಯೇ ಇಲ್ಲವಲ್ಲ ಎನ್ನುತ್ತಾರೆ. ರಸ್ತೆ ಸಣ್ಣದು ಸ್ವಾಮಿ, ಆಗ-೪೦ ವರ್ಷಗಳ ಹಿಂದೆ ಎಲ್ಲಾ ರಸ್ತೆಗಳೂ ಸಣ್ಣವೇ ಇದ್ದವಲ್ಲ. ಸರಕಾರವೇ ಮನೆಯ ಪ್ಲಾನಿಗೆ ಪರವಾನಿಗೆ ಕೊಟ್ಟದ್ದೀರಲ್ಲ. ಅದು ದಾಖಲೆ ಅಲ್ಲವಾ? ವರ್ಷ-ವರ್ಷ ಮನೆ ಕಂದಾಯ ಕಟ್ಟುತ್ತಿದ್ದೇವೆ - ಕಟ್ಟಿಸಿಕೊಳ್ಳುತ್ತಿದ್ದಾರಲ್ಲ - ಆ ದಾಖಲೆ ಸಾಲದಾ? ಸರಕಾರ ಕಾಯಿದೆ ಬದಲಾಯಿಸಿದಾಗಲೆಲ್ಲ ನಾವು ನಮ್ಮ ಮನೆಯನ್ನು ಅದರ ಎದುರಿನ ರಸ್ತೆಯನ್ನು (ರಸ್ತೆ ಎಂಬ ಭ್ರಮೆಯನ್ನು) ಬದಲಾಯಿಸಬೇಕಾ? ಜನಸೇವಕ - ಕೆಲವು ಅರ್ಧ ಪುಟದ ಜಾಹೀರಾತು ಬಂತು - ನೀವು ಫೋನ್ ಮಾಡಿ, ಜನಸೇವಕರು ನಿಮ್ಮ ಮನೆಗೇ ಬಂದು ಈ ಆಸ್ತಿಯ ದಸ್ತಾವೇಜು ಮಾಡಿಕೊಡುತ್ತಾರೆ. ಆದರೆ ಯಥಾ ಪ್ರಕಾರ ಈ ಸೌಲಭ್ಯ ಇರುವದು ರಾಜಧಾನಿ ಬೆಂಗಳೂರಿನಲ್ಲಿರುವವರಿಗೆ ಮಾತ್...