ಮಬ್ಬು

ಸೂರ್ಯ ಅಲ್ದೆ ಹೋದ್ರು ಪರವಾಗಿಲ್ಲ, ಚಂದ್ರ ಆದ್ರೂ ಕಾಣ್ತಾ ಇದನಲ್ಲಾ. ಸ್ವಲ್ಪ ಸಮಾಧಾನ. 

ನಾಲ್ಕೈದು ದಿನದಿಂದ ಕರಿ ಗುಮ್ಮನಂತೆ ಮೋಡ ಮುಚ್ಕೊಂಡು ಮುನಿಸ್ಕೊಂಡಿರೋ ಆಕಾಶಾ, ಡಿಸೆಂಬರ್ ತಿಂಗಳೇನೋ ಎನ್ನೋ ತರ ಚಳಿ. ಆವಾಗ ಈವಾಗ ಜಿಟಿ ಜಿಟಿ ಮಳೆ. 

ಇದೇನು ಮಲೆನಾಡು ಅನ್ಕೋಬಿಟ್ಟಿದ್ಯೇನೂ ಈ ಮಳೆಗಾಲ. ಇದು ಬೆಂಗಳೂರು, ಇಲ್ಲಿ ಮಳೆಗಾಲ ಅಂದ್ರೆ ಸುಮ್ನೆ ಸ್ವಲ್ಪ ಸ್ವಲ್ಪ ಬರ್ಬೇಕು, ಹೋಗ್ತಾ ಇರ್ಬೇಕು. ಇನ್ನು ಹೆಚ್ಚಂದ್ರೆ ಸಂಜೆ ಹೊತ್ತಿಗೆ, ಎಲ್ಲರೂ ಕಚೇರಿಗಳಿಂದ ಮನೇಗ್ಹೊಗೋ ಹೊತ್ನಲ್ಲಿ ಧೋ ಎನ್ಕೊಂಡು ಹೊಡಿಬೇಕು. 

ಈ ಕತ್ತಲಲ್ಲಿ ಮನಸ್ಸೂ ಮಬ್ಬಾಗ್ತಾ ಹೋಗತ್ತೆ. ಒಂದು ನಾಲ್ಕ್ ದಿನಕ್ಕೆ ನಮ್ಮದೆಲ್ಲ ಈ ಪರಿಸ್ಥಿತಿ ಆದರೆ, ಚಳಿ ಪ್ರದೇಶದಲ್ಲಿ ಇರೋವರು ಏನು ಮಾಡ್ತಾರೆ ?

ನೋಡಿ, ಇವತ್ತ್  ಬೆಳಿಗ್ಗೆ ಮತ್ತೆ ಮಬ್ಬು. ಬಿಸಿಲಿಲ್ಲ. ಬೆಳಕಿಲ್ಲ. ಬರಿ ಕತ್ತಲು. ಮನೆ ಹೊರಗೆ. ಮನದೊಳಗೆ. 

ನಿನ್ನೆ ಸಂಜೆ ಚಂದ್ರನ ಶಾಖಕ್ಕೆ ಮೋಡ ಕರಗಿದ್ದ್ವಾ? ಹಾ ಹಾ ! 

ನಮ್ಮ ಬೆಂಗಳೂರಲ್ಲಿ ರೂಮ್ ಹೀಟರ್ ಬೇಕೇನೋ ಅನ್ನೋ ಪರಿಸ್ತಿತಿ ? ನಂಬಲಸಾಧ್ಯ !

೧೫-ಜುಲೈ 

ಅದೇ ಪರಿಸ್ಥಿತಿ ಮುಂದುವರೀತ ಇದೆ. ಹಗಲೆಲ್ಲ ಕರಿ ಮೋಡ. ರಾತ್ರಿ ಸ್ವಲ್ಪ ಮೋಡದಿಂದ ಬಿಡುಗಡೆ. ನಿನ್ನೆ ಅಂತೂ ಚಂದ್ರ ರೌಂಡ್ ಆಗಿ, ದುಮ್ಮನಾಗಿ ಸುಮಾರು ಚೆನ್ನಾಗಿ ಕಾಣತಾ ಇದ್ದ.

"ಪಗಲೂಮ್ ಇರುಳುಂ ಸುರಿವ ಜಡಿ ಮಳೆಯಿಂ ಎನ್ನ ಮನಂ ಬೇಸತ್ತುದು. ಏನಾದರೂಮ್ ನಲ್ಗತೆಯಂ ಪೇಳು" - ಎನ್ನುವ ಮನೋರಮೆಯಂತೆ. ಯಾರೂ ಈಗ ಅವಳಂತೆ ಹೇಳುವದಿಲ್ಲ ಬಿಡಿ. ನಲ್ಗತೆ, ಮಳ್ ಗತೆ , ಎಲ್ಲ ಕತೆಗಳೂ ಈಗ ಎಲ್ಲರ ಬೆರಳ ತುದಿಯಲ್ಲಿ ಸಿಕ್ಕಿಬಿಡುವಾಗ, ಇವೆಲ್ಲ ಒಂಥರಾ ಜುಗುಪ್ಸೆ ಬಂದು ಬಿಡುತ್ತದೆ. 

ಆದರೂ ನಿನ್ನೆ ಒಂದು ಸಿನಿಮ ನೋಡಿದೆ. "ದಸ್ವಿ" - ಅಭಿಷೇಕ್ ಬಚ್ಚನ್ ಅದರ ನಾಯಕ. ನೋಡುವಾಗ ಪರವಾಗಿಲ್ಲ ಅನಿಸಿತು. 

ಚೌಧರಿ - ನಮ್ಮ ನಾಯಕ ಒಬ್ಬ ಟಿಪಿಕಲ್ ರಾಜಕಾರಣಿ. ದುರಹಂಕಾರಿ, ಒರಟ, ಸ್ವಾರ್ಥಿ ಇತ್ಯಾದಿ ಇತ್ಯಾದಿ. ಎಲ್ಲ ರಾಜಕಾರಣಿಗಳಂತೆ ಇವನು ಸಹ. 

ಆದರೆ ದುರ್ದೈವ ವಶಾತ್ ಅವನು ಜೈಲು ಸೇರುತ್ತಾನೆ. ಟಿಪಿಕಲ್ ಆಗಿರುವಂತೆ ಅವನಿಗೆ ಜೈಲಲ್ಲೂ ವಿ ಐ ಪಿ ಟ್ರೀಟ್ಮೆಂಟ್ ಸಿಗುತ್ತದೆ. 

ನಾನು ಪೂರ್ತಿ ಕತೆ ಹೇಳತೊಡಗಿಬಿಟ್ಟೆ.ಬೇಡ, ಹೇಳುವದಿಲ್ಲ. 

ಆದರೆ ಅಲ್ಲಲ್ಲಿ ಕೆಲವು ಐತಿಹಾಸಿಕ ರೆಫರೆನ್ಸ್ ಗಳಿವೆ. ಚೌಧರಿಯ ನಿರಕ್ಷರಸ್ತ ಮುಗ್ದ ಹೆಂಡತಿ ಅವನು ಜೈಲಿಗೆ ಹೋದಾಗ ಅವನ ಖುರ್ಚಿಯನ್ನು ಕಾಯ್ದುಕೊಳ್ಳುವದು, ಅವಳು ಊರಲ್ಲೆಲ್ಲ ತನ್ನ ಪ್ರತಿಮೆಗಳನ್ನು ನಿಲ್ಲಿಸುವದು ಇತ್ಯಾದಿ ಇತ್ಯಾದಿ. 

ನೋಡಿ, ಕತೆ ಸುಮಾರಾಗಿದೆ. - ಉತ್ತರಾರ್ಧದಲ್ಲಿ ಸ್ವಲ್ಪ ನಾಟಕೀಯ ಮತ್ತು ಅನೈಜವಾಗುತ್ತಾ ಹೋದರು, ಸಿನಿಮಾವನ್ನು ಒಮ್ಮೆ ನೋಡಬಹುದು. 

ಅವನು ಮೆಟ್ರಿಕ್ - ದಸವಿ - ಪಾಸು ಮಾಡಬೇಕೆಂದುಕೊಂಡರೆ, ಇಡೀ ವಿಶ್ವವೇ ಅವನಿಗೆ ಅನುಕೂಲವಾಗುತ್ತದೆ. ನಾವೆಲ್ಲಾ ಏನನ್ನಾದರೂ ಮಾಡಬೇಕೆಂದರೆ - ಸಚ್ಛೇ ದಿಲ್ ನಿಂದಲೇ - ಏನನ್ನಾದರೂ ಮಾಡಬೇಕೆಂದರೆ ಅದೇ ವಿಶ್ವ ನಮಗೆ ಪ್ರತಿಕೂಲವಾಗುತ್ತದೆ. ವಾಟ್ ಎನ್ ಐರನಿ !

Comments

Popular posts from this blog

ಹೂಗಳು

ಎಮ್ಮೆ

ಸೇಲ್