ಸ್ವಾತಂತ್ರ್ಯ
ಸ್ವಾತಂತ್ರ್ಯ ಎನ್ನೋದು ತುಂಬಾ ಕ್ಲಿಷ್ಟವಾದ, ಗಹನವಾದ ವಿಷಯ. ಮಹಾತ್ಮಾ ಗಾಂಧಿಯಂತವರು ತಮ್ಮ ಇಡೀ ಜೀವನವನ್ನೇ ಮುಡುಪಾಗಿ ಇಟ್ಟಿದ್ದರೂ, ನಮಗೆಲ್ಲ ನಿಜವಾದ ಅರ್ಥದ ಸ್ವಾತಂತ್ರ್ಯ ಕೊಡಿಸಲು ಅವರಿಂದ ಸಾಧ್ಯ ಆಗಲಿಲ್ಲ.
ಹಸಿವಿನಿಂದ ಸ್ವಾತಂತ್ರ್ಯ,, ಮೂಢ ನಂಬಿಕೆಗಳಿಂದ ಸ್ವಾತಂತ್ರ್ಯ,, ಬೇಧಭಾವಗಳಿಂದ ಸ್ವಾತಂತ್ರ್ಯ,, ಜಾತಿವಾದದಿಂದ ಸ್ವಾತಂತ್ರ್ಯ , ತಾರತಮ್ಯದಿಂದ ಸ್ವಾತಂತ್ರ್ಯ , ಹಿಂಸೆಯಿಂದ, ಕ್ರೌರ್ಯದಿಂದ ಸ್ವಾತಂತ್ರ್ಯ - ಇವೆಲ್ಲ ಬೇಕಲ್ಲವೇ? ಬೇಕಾ ?
ನಮ್ಮ ಮನದಾಳದಿಂದ ಬರ್ಬೇಕು - 'ನಾವು ಯಾರೊಬ್ಬರ ಅಡಿಯಾಳಲ್ಲ, ನಮಗೆ ನಮ್ಮ ದೇಶದಲ್ಲಿ ಮಾತಾಡುವ, ಉಣ್ಣುವ, ಉಡುವ, ಓದುವ, ಬರೆಯುವ , ಕಲಿಯುವ ಸ್ವಾತಂತ್ರ್ಯವಿದೆ. ಯಾರೊಬ್ಬರೂ ಈ ವಿಷಯಗಳಲ್ಲಿ ನಮ್ಮನ್ನು ನಿರ್ಬಂಧಿಸುವಂತಿಲ್ಲ, ನಿರ್ಬಂಧಿಸಕೂಡದು'.
ಆದರೆ ನಮ್ಮ ಮನದಲ್ಲಿ 'ಅವರು ಒಡೆಯರು, ನಾವು ಅವರ ಕೆಳಗಿನ ಆಳುಗಳು' ಎಂಬ ಭಾವನೆ ಹೋಗುತ್ತಾನೇ ಇಲ್ಲ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಾದ ನಾವೇ ಪ್ರಭುಗಳು - ಇನ್ಯಾರೂ ಅಲ್ಲ ಎಂದು ನಾವು ಯೋಚಿಸುವದೇ ಇಲ್ಲ.
ಹಳೆಯ ಕಾಲದ ರಾಜರು ಹೋದರೂ, ನಾವೇ ಹೊಸ ಕಾಲದ ರಾಜರನ್ನು ನಿರ್ಮಿಸಿಕೊಂಡು . ಇಡೀ ದಿನ 'ಬಹು ಪರಾಕ್, ಬಹು ಪರಾಕ್' ಎನ್ನುತ್ತಲೇ ಇರುತ್ತೇವೆ.
ಕೆಂಪು ನಮನ ಮಾಡುತ್ತಾ, ಈ ಎಲ್ಲ ಸಾಮಾಜಿಕ ಅನಿಷ್ಟಗಳಿಂದ ಸ್ವಾತಂತ್ರ್ಯ ತೆಗೆದುಕೊಂಡೆ ಕೊಳ್ಳುತ್ತೇವೆ - ಎಂದು ಹೇಳುತ್ತಿದ್ದವನು, ಹೋರಾಟ ಮಾಡಿ ಗೆಲ್ಲಲಾಗದೆ, ರಾಜಕಾರಣದ ಕೆಸರಿನಲ್ಲಿ ಇಳಿದು ಬಿಟ್ಟ. (ನಮಗೆ ಕೆಂಪು ನಮನ ಬೇಕಿರಲಿಲ್ಲ, ಹಾಗೆಂದು ಕೇಸರಿಯು ಬೇಕಿರಲಿಲ್ಲ.)
ಇನ್ನೂ ಒಬ್ಬ, ಪಾಪ, ಮಾಡಲಾರದ ತಪ್ಪಿಗೆ, ಎರಡು ವರ್ಷದಿಂದ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಅವರೆಲ್ಲವನ್ನು ತುಂಡು ತುಂಡು ಮಾಡುವ ಟೋಳಿ ಎಂದು ಮಾಧ್ಯಮಗಳು ಹೆಸರಿಸಿಬಿಟ್ಟರು.
ತಮಾಷೆಯೆಂದರೆ ನಮಗೆಲ್ಲ ಈ ಅನ್ಯಾಯ ಕಣ್ಣಿಗೆ ಕಾಣಿಸುವದೇ ಇಲ್ಲ. ನಾವು ಸಹ, ಇದೇನಿದು ಒಬ್ಬರಾದ ಮೇಲೆ ಒಬ್ಬರು ದೇಶ ದ್ರೋಹಿಗಳೇ ಆಗುತ್ತಿದ್ದಾರಲ್ಲಾ ಎನ್ನುತ್ತಿರುವವರ ಜೊತೆ ತಲೆ ಹಾಕುತ್ತಿದ್ದೇವೆ.
ರಾಜಕಾರಣ ಮರೆತು ಬಿಡಿ. ನಮಗೆ ನಮ್ಮ ಮನೆಗಳಲ್ಲಿ, ನಮ್ಮ ಬೀದಿಗಳಲ್ಲಿ ಎಷ್ಟು ಸ್ವಾತಂತ್ರ್ಯವಿದೆ?
ನಮ್ಮ ಅರಿಷಡ್ವರ್ಗಗಳಿಂದ ಸ್ವಾತಂತ್ರ್ಯ ಸಿಕ್ಕಿದೆಯೇ?
ಇವೆಲ್ಲವನ್ನೂ ಮರೆಯಿಸಿ, ಇಡೀ ದಿನ ನಮ್ಮನ್ನು ಬೇಡದ ಕಲಹಗಳ ಮಧ್ಯದಲ್ಲಿ ಸಿಲುಕಿಸಿ, 'ತಮಾಷೆ ನೋಡುತ್ತಾ ಇರಿ. ಇವೆಲ್ಲ ಬೇಡದ ಜಂಜಾಟ ಮರೆತು ಬಿಡಿ' ಎನ್ನುತ್ತಿವೆ ದುರ್ ದರ್ಶನಗಳು. ನಾವೂ ಹಾಂಜಿ ಹಾಂಜಿ ಎಂದು ತಲೆ ಹಾಕುತ್ತಿದ್ದೇವೆ.
ಅದೇನೋ ಮೊನ್ನೆ ಚೂರು ಭಾಗವತ ಗ್ಲಾನ್ಸ್ ಮಾಡಿದೆ. ಅದರಲ್ಲಿ ಕಲಿಯುಗದ ವರ್ಣನೆ ಚೆನ್ನಾಗಿದೆ. ಬ್ರಾಹ್ಮಣರು ಮಂತ್ರಗಳ ವ್ಯಾಪಾರ ಮಾಡಿ ಬದುಕುತ್ತಾರೆ. ಹೆಂಗಳೆಯರು ರೂಪದ ವ್ಯಾಪಾರ ಮಾಡಿ ಬದುಕುತ್ತಾರೆ - ಅಂತೆಲ್ಲ ಬರೆದಿದ್ದಾರೆ. ಆದರೆ ಯಾರಾದರೂ ದ್ವೇಷವನ್ನು ಮಾರಾಟ ಮಾಡಿ ಬದುಕುವ ಉಲ್ಲೇಖ ಇಲ್ಲ.
ಪಾಪ, ಯಾರು ತಾನೇ ಊಹೆಮಾಡಬಲ್ಲರಾಗಿದ್ದರು - ದ್ವೇಷವನ್ನು ಮಾರುತ್ತಾರೆ, ನಾವೆಲ್ಲಾ ಖುಷಿ ಖುಷಿಯಿಂದ ಬಾಚಿಬಾಚಿ ಕೊಳ್ಳುತ್ತೇವೆ ಅಂತ .
Comments
Post a Comment