ಟಪ್ಪರ್ ವೇರ್, ಆಮ್ ವೇ ಮತ್ತು ಅಲ್ಬೇನಿಯಾ
ನಿಮ್ಮಲ್ಲಿ ಬಹಳಷ್ಟು ಮಂದಿ 'ಬೇಗ ಶ್ರೀಮಂತರಾಗುವ' ಸ್ಕೀಮ್ಗಳನ್ನು ಕೇಳಿದ್ದೀರಾ. ಅಲ್ಪ ಸ್ವಲ್ಪವಾದರೂ ಅವಕ್ಕೆ ದುಡ್ಡು ಸುರಿದಿದ್ದೀರಾ. ನಿಮ್ಮ ಹತ್ತಿರದ ಸಂಬಂಧಿ ಕಮಲತ್ತೆ ಬಂದು ಅಷ್ಟು ಚೆನ್ನಾಗಿ 'ನೀನು ಇನ್ನೇನು ಮಾಡುವದೂ ಬೇಡ. ಇನ್ನು ಐದು ಜನರನ್ನು ಮೆಂಬರ್ ಮಾಡಿಬಿಟ್ಟರೆ ಸಾಕು. ಅವರು ಐದು ಜನರನ್ನು ಮೆಂಬರ್ ಮಾಡುತ್ತಾರೆ. ಹೀಗೆ ಮುಂದುವರಿಯುತ್ತಾ ಹೋಗುತ್ತದೆ. ನಿನ್ನ ನಂತರ ಪ್ರತಿ ಒಬ್ಬ ಮೆಂಬರಾದಾಗಲೂ ನಿನಗೆ ಕುಳಿತಲ್ಲೇ ದುಡ್ಡು ಬರುತ್ತದೆ. ಆಮೇಲೆ ಈ ಪ್ಲಾಸ್ಟಿಕ್ ಡಬ್ಬಿ/ ಫೇಸ್ ಕ್ರೀಮ್ /ಇನ್ಯಾವುದೋ ಒಂದು ಮನೆಯಲ್ಲೇ ಕುಳಿತು ನಿನ್ನ ಪರಿಚಯದವರಿಗೆ ಮಾರಾಟ ಮಾಡು.'
ಆಹಾ, ಕುಳಿತಲ್ಲೇ ದುಡ್ಡು ಯಾರಿಗೆ ಬೇಡ. ಅದೂ ಪಾಪದ ಕಮಲತ್ತೆ ಕಷ್ಟ ಪಟ್ಟು ಮನೆ ಮನೆಗೆ ತಿರುಗುತ್ತಿದ್ದಾರೆ. ಅವರಿಗೆ ಸ್ವಲ್ಪ ಸಹಾಯವಾದರೂ ಮಾಡೋಣ. ನೀವು ಕೊಟ್ಟಿರಿ, ಒಂದು ಐನೂರೋ ಸಾವಿರವೋ. ಮೆಂಬರ್ ಮಾಡುವದು ನಿಮ್ಮಿಂದಾಗಲಿಲ್ಲ. ಆಮೇಲೆ ಕಮಲತ್ತೆಯಾಗಲಿ ಇನ್ಯಾರೇ ಆಗಲಿ ಒಂದು ನಯಾ ಪೈಸೆ ನಿಮಗೆ ಕೊಡಲಿಲ್ಲ.
ಇಂತಹ ಸ್ಕೀಮ್ ಗಳಿಗೆ ಪಿರಮಿಡ್, MLM (ಮಲ್ಟಿ ಲೆವೆಲ್ ಮಾರ್ಕೆಟಿಂಗ್ ), ಪಾಂಜಿ ಸ್ಕೀಮ್ ಎನ್ನುತ್ತಾರೆ. ಜಗತ್ತಿನಾದ್ಯಂತ ಎಷ್ಟು ಜನ ಇಂತಹ ಮಾತುಗಳಿಗೆ ಮರುಳಾಗಿ ತಮ್ಮ ದುಡ್ಡು ಕಳೆದುಕೊಂಡಿದ್ದಾರೆ.
ನನ್ನ ನೆನಪಿನಂತೆ ಒಂದು ಕಾಲದಲ್ಲಿ ಟಪ್ಪರ್ ವೇರ್ ಮತ್ತು ಅಮವೇ ಈಗ ಮುವತ್ತು ವರ್ಷದ ಹಿಂದೆ ಪಿರಮಿಡ್ ಸ್ಕೀಮ್ ಆರಂಭಿಸಿದರು. ನಮ್ಮ ಮನೆಯವರ ಸ್ನೇಹಿತ ನಮ್ಮನ್ನು ಒಂದು ಆಮ್ ವೇ ಕಾನ್ಫರೆನ್ಸ್ ಗೆ ಕರೆದುಕೊಂಡು ಹೋಗಿದ್ದ. ಅದರಲ್ಲಿ ಭಾಷಣಕಾರ, ದೊಡ್ಡ ಹಾಲಲ್ಲಿ ನೂರಾರು ಜನರ ಮಧ್ಯೆದಲ್ಲಿ, ಆಮ್ ವೇ , ಅದರ ಪ್ರಾಡಕ್ಟ್ ಗಳು, ನೀವು ಮೆಂಬರಾದ್ರೆ ಹೇಗೆ ಕುಬೇರನಾಗಬಹುದು ಎಂದು ಸ್ಲೈಡ್ ಗಳ ಸಹಿತ ನಮಗೆಲ್ಲ ವಿವರಿಸಿದ.
ಇನ್ನು ಟಪರ್ ವೇರ್, ಓರಿಫ್ಲೇಮ್ ಇಂಥವುಗಳ ಮಾರಾಟಕ್ಕೆ ನಮ್ಮ ಪರಿಚಯದ ಮಹಿಳೆಯರೇ ಮನೆಗೆ ಬಂದು/ ಮನೆಗೆ ಕರೆದು ನಮ್ಮನ್ನು ಸಿಲುಕಿಸಲು ಪ್ರಯತ್ನಿಸಿ ನೋಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಲ್ತ್ ಫುಡ್ ಗಳದ್ದು ಅವಾಂತರವು ಹಳ್ಳಿ ಹಳ್ಳಿಗೆ ಹಬ್ಬಿದೆ. ನಮ್ಮ ಊರಿನ ಕುಗ್ರಾಮದಲ್ಲಿರುವ ನಮ್ಮ ನೆಂಟರು ಪ್ರೋಟೀನ್ ಪೌಡರ್ ಎಂದು ನಮಗೆ ಸಾವಿರಾರು ರೂಪಾಯಿಯ ಟೋಪಿ ತೊಡಿಸಿದ್ದಾರೆ.
ಏನಿವು - ಪಿರಮಿಡ್ ಕಂಪನಿಗಳು?
ಸಾಧಾರಣವಾಗಿ ಕಂಪನಿಗಳು ಫಾಕ್ಟರಿಯಲ್ಲಿ ಒಂದು ವಸ್ತುವನ್ನು ತಯಾರಿಸಿ ಅದನ್ನು ಮಾರಿ ಲಾಭ ಮಾಡಿಕೊಳ್ಳುತ್ತಾರೆ. ಅಂಗಡಿಗಳವರು ಹೋಲ್ ಸೇಲಿನಲ್ಲಿ ಸಾಮಾನು ತರಿಸಿ ಅದನ್ನು ಸ್ವಲ್ಪ ಹೆಚ್ಚು ಬೆಲೆಗೆ ಮಾರಾಟ ಮಾಡಿ ಆದಾಯ ಗಳಿಸುತ್ತಾರೆ. ಈ ಪಿರಮಿಡ್ ಕಂಪನಿಗಳು ಯಾವುದೇ ಮಾರಾಟಕ್ಕಿಂತ ಹೆಚ್ಚಾಗಿ ಮೆಂಬರ್ ಶುಲ್ಕದಿಂದ ಆದಾಯ ಗಳಿಸುತ್ತಾರೆ. ಅವರು ಹೆಸರು ಮಾತ್ರಕ್ಕೆ ಕೆಲವು ವಸ್ತುಗಳನ್ನು ಮಾರಾಟ ಮಾಡುತ್ತಾರೆ - ಆ ವಸ್ತುಗಳು ಒಂದು ತುಂಬಾ ಕಳಪೆ ಗುಣಮಟ್ಟದವು ಅಥವಾ ತುಂಬಾ ದುಬಾರಿ.
ಮೆಂಬರ್ಶಿಪ್ ಫೀ ಸ್ವಲ್ಪ ಹೆಚ್ಚೆ ಇರುತ್ತದೆ. ಮೆಂಬರ್ ಗಳು ಬೇರೆಯವರನ್ನು ಮೆಂಬರ್ ಮಾಡಬೇಕು - 'ನೀವು ಕೇವಲ ಐದು ಮೆಂಬರ್ ಮಾಡಿ ಸಾಕು' ಎಂದು ನಿಮಗೆ ಸಮಾಧಾನ ಮಾಡುತ್ತಾರೆ. ನೀವು ಐವರನ್ನು ಮೆಂಬರ್ ಮಾಡಿದರೆ ಅವರಲ್ಲಿ ಪ್ರತಿಯೊಬ್ಬರೂ ಇನ್ನೈವರನ್ನು ಮೆಂಬರ್ ಮಾಡಿದರೆ, ಅಲ್ಲಿಗೆ ಇಪ್ಪತೈದು ಜನವಾಯಿತು. ಹಾಗೆ ಮುಂದುವರಿಯುತ್ತಾ ಪಿರಮಿಡ್ ಆಗುತ್ತದೆ. ನಿಮ್ಮ ಬ್ರ್ಯಾಂಚ್ನಲ್ಲಿ ಒಬ್ಬೊಬ್ಬ ಮೆಂಬರ್ ಆದಾಗಲೂ ನಿಮಗೆ ಒಂದಿಷ್ಟು ಕಮಿಶನ್ ಸಿಗುತ್ತದೆ.
ನಿಮಗೆ ಅನಿಸುತ್ತದೆ - ಒಂದು ನಾಲ್ಕು ಮೆಂಬರ್ ಆದರೆ ನಿಮ್ಮ ಅಸಲು ನಿಮಗೆ ಬಂದು ಬಿಡುತ್ತದೆ. ನಂತರ ಬರುವ ಕಮಿಷನ್ ಎಲ್ಲ ನಿವ್ವಳ ಲಾಭ.
ಆದರೆ ನಿಜವಾಗಿ ನಡೆಯುವದೇನೆಂದರೆ ಬಹಳಷ್ಟು ಜನಕ್ಕೆ ಆ ಚೈನನ್ನು ಮುಂದುವರಿಸಲು ಆಗುವದಿಲ್ಲ. ನೀವೇ - ಐದು ಜನರನ್ನು ಸಾವಿರ ರೂಪಾಯಿ ಕೊಟ್ಟು ಮೆಂಬರ್ ಆಗಿ ಎಂದು ಮನವರಿಕೆ ಮಾಡಬಲ್ಲಿರಾ? ಇಲ್ಲ ತಾನೇ? ನಿಮ್ಮ ಕೆಲಸ ಬೊಗಸೆ ಬಿಟ್ಟು ಮನೆ ಮನೆಗೆ ಹೋಗಿ ಅವರು ಒಪ್ಪದಿದ್ದರೆ - ಬಹಳಷ್ಟು ಜನ ಒಪ್ಪುವದಿಲ್ಲ - ಅವಮಾನ, ಬೇಜಾರು ಮಾಡಿಸಿಕೊಂಡು ಬರುಲು ತಯಾರಿರುತ್ತೀರಾ.
ಮೆಂಬರ್ ಚೈನ್ ಮುಂದುವರಿಯದಿದ್ದರೆ ನಿಮ್ಮ ಪ್ರಾಫಿಟ್ ಜೀರೋ.
Comments
Post a Comment