ಎಮ್ಮೆ
ನಿಮಗೆ ರಾಬಿನ್ ಹುಡ್ ಕಥೆ ಗೊತ್ತೆ? ಅವನು ಶ್ರೀಮಂತರನ್ನು ಲೂಟಿ ಮಾಡಿ ಆ ಹಣವನ್ನು ಬಡವರಿಗೆ ಹಂಚುತ್ತಿದ್ದನಂತೆ.
ಈಗಿನ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಆರಿಸಿ ಬಂದು ಸರಕಾರ ರಚಿಸಿದರೆ ಅವರು ಈ ಕೆಲಸವನ್ನೇ ಮಾಡುತ್ತಾರಾ? ನಿಮ್ಮ ಮನೆಯಲ್ಲಿ ಎರಡು ಎಮ್ಮೆ ಇದ್ದಾರೆ ಒಂದನ್ನು ತೆಗೆದುಕೊಂಡು ಹೋಗಿ 'ಅವರಿಗೆ' ಕೊಡುತ್ತಾರಾ ? ನಿಮ್ಮ ಮನೆಯ ಹೆಂಗಸರ ಮಂಗಳಸೂತ್ರವನ್ನೂ ಸಹ ಕಸಿದು 'ಅವರಿಗೆ' ಕೊಡುತ್ತಾರಾ?
ಅವರು ಎಂದರೆ ಗೊತ್ತಾಗಲಿಲ್ಲವಾ - ಅದೇ ನಮ್ಮ ದೇಶಕ್ಕೆ ಅಕ್ರಮವಾಗಿ ನುಸುಳಿ ಬಂದವರು, ಬಹಳ ಮಕ್ಕಳನ್ನು ಮಾಡಿಕೊಳ್ಳುವವರು. ಇನ್ನೂ ಎಷ್ಟು ಬಿಡಿಸಿ ಹೇಳಬೇಕು ನಿಮಗೆ?
ಅರವತ್ತಕ್ಕೆ ಅರಳು ಮರುಳು ಎಂದು ಏನೇನೋ ಬರೆಯಬೇಡ ಎಂದಿರಾ? ಪತ್ರಿಕೆಗಳಲ್ಲಿ ಬಂದಿತ್ತಲ್ಲ - ಚುನಾವಣೆ ಪ್ರಚಾರದಲ್ಲಿ ನಮ್ಮ ಪ್ರಧಾನಿಯವರೇ ಹೇಳಿದ್ದಾರೆ ಎಂದು.
ಇದು ಸ್ವಲ್ಪ ಡೇಂಜರ್ ಅನಿಸುತ್ತಿದೆ ಅಲ್ವಾ. ಆದರೆ ನಾವು ಯಾವಾಗಲೂ ನಮ್ಮ ಹಿಂದೂ ಧರ್ಮದ ರಕ್ಷಕ ಪಕ್ಷಕ್ಕೆ ವೋಟ್ ಮಾಡಿ ಗೆಲ್ಲಿಸುತ್ತೇವೆ ಬಿಡಿ ಅಂತೀರಾ. ಸ್ವಲ್ಪ ಇತಿಹಾಸ ನೋಡೋಣ.
ನೀವು ಅಥವಾ ನಿಮ್ಮ ಪತಿ/ಪತ್ನಿ/ ಮಕ್ಕಳು ನೌಕರಿಯಲ್ಲಿದ್ದೀರಾ? ಹಾಗಾದರೆ ನೀವು ಆದಾಯ ತೆರಿಗೆಯನ್ನು ಇಷ್ಟು ವರ್ಷ ಕೊಡುತ್ತ ಬಂದಿದ್ದೀರಾ. ಆದರೆ ನಿಮ್ಮ ಮನೆಯ ಆಳು, ಡ್ರೈವರ್ ಅಥವಾ ಅಡಿಗೆಯವರು ಆದಾಯ ತೆರಿಗೆ ಕೊಟ್ಟಿದ್ದಾರಾ. ಇಲ್ಲ ತಾನೇ. ಹಾಗಂತ ಸರಕಾರ (ನಿಮ್ಮ ತೆರಿಗೆಯಿಂದ ಬಂದ ದುಡ್ಡಿನಿಂದ) ಕಟ್ಟಿದ ರಸ್ತೆ, ಕೆರೆ, ಕಾಲುವೆ (ಸ್ವಲ್ಪ ಜೋಕ್ ಮಾಡಿದೆ) ಇವುಗಳನ್ನು ಅವರೆಲ್ಲ ಉಪಯೋಗಿಸುತ್ತಿಲ್ಲವಾ? ಸರಕಾರ ನಡೆಸುವ ಶಾಲೆ-ಕಾಲೇಜಿಗೆ ತಮ್ಮ ಮಕ್ಕಳನ್ನು ಕಲಿಸುತ್ತಿಲ್ಲವಾ?
ಈ ಹತ್ತು ವರ್ಷ ನೀವು ತೆರಿಗೆ ಕಟ್ಟಿದ್ದೀರೋ ಇಲ್ಲವೋ? ನಿಮ್ಮ ದುಡ್ಡು ಪರೋಕ್ಷವಾಗಿ ಬಡವರ ಹಿತಕ್ಕೆ ಬಳಕೆಯಾಯಿತೋ ಇಲ್ಲವೋ?
ಆದರೆ ಅವರ್ಯಾರೂ ಮುಸಲ್ಮಾನರಲ್ಲ ಎನ್ನುತ್ತಿದ್ದೀರಾ? ಆದರೆ ಸರಕಾರದಿಂದ ಆಗುವ ಕಲ್ಯಾಣ ಕಾರ್ಯಕ್ರಮಗಳು ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗು ಅನ್ವಯಿಸುತ್ತದೆಯಲ್ಲ.
ಒಪ್ಪಿಕೊಳ್ಳುತ್ತೇನೆ - ನಾವು ನೀವು ಶ್ರೀಮಂತರಲ್ಲ. ನಾವು ಕಷ್ಟ ಪಟ್ಟು ದುಡಿದ ಹಣ ಬಡವರಿಗೆ ಕೊಡಬೇಕೆಂದರೆ ಅದು ನ್ಯಾಯವಲ್ಲವೇನೋ. ಆದರೆ ಸರಕಾರ ನಡೆಯಬೇಕಲ್ಲ.
ಇನ್ನು ಸರಕಾರ ನಮ್ಮ ದುಡ್ಡನ್ನು ಏನೇನು ಮಾಡುತ್ತದೆ ನೋಡೋಣ - ಸರಕಾರಕ್ಕೆ ಏನೇನು ಖರ್ಚು ಮಾಡುತ್ತದೆ ನೋಡೋಣ. ಸರಕಾರಿ ಇಲಾಖೆಗಳ ಸಿಬ್ಬಂದಿಗೆ ಸಂಬಳ ಕೊಡಬೇಕು. ಸಾರ್ವಜನಿಕ ಆಸ್ತಿಗಳಾದ ರಸ್ತೆ, ನೀರು, ವಿದ್ಯುತ್ ಇತ್ಯಾದಿಗಳ ನಿರ್ವಹಣೆ ಮಾಡಬೇಕು. ಸರಕಾರ ನಡೆಸುವವರಿಗೆ ಸಂಬಳ ಕೊಡಬೇಕು. (ಅವರ ಚುನಾವಣೆ ಪ್ರಚಾರಕ್ಕೆ ಹಣ ಕೊಡಬೇಕು). ಅದೆಲ್ಲ ನಡೆಯುವದು ತೆರಿಗೆಯಿಂದ -ಆಸ್ತಿ ತೆರಿಗೆ, ಜಿ ಸ್ ಟಿ, ಆದಾಯ ತೆರಿಗೆ ಇತ್ಯಾದಿಗಳಿಂದ. ಇನ್ನೊಂದು ನೆನಪಿಡಿ - ಆದಾಯ ತೆರಿಗೆ ಒಂದನ್ನು ಬಿಟ್ಟರೆ ಉಳಿದೆಲ್ಲ ತೆರಿಗೆಗಳನ್ನು ನಮ್ಮಂತೆ ಬಡವರೂ, ಮುಸಲ್ಮಾನರು, ದಲಿತರು ಎಲ್ಲರೂ ಕೊಡುತ್ತಾರೆ.
ಇನ್ನು ಸರಕಾರ ಬೇರೆಯವರಿಗೆ ಅನುಕೂಲ ಮಾಡುವದರ ಬಗ್ಗೆ ಹೇಳುವದಿದ್ದರೆ - ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಬಂದರು, ಏರ್ಪೋರ್ಟ್, ವಿದ್ಯುತ್ ಉತ್ಪಾದನಾ ಘಟಕ ಇವನ್ನೆಲ್ಲ ಒಂದು ವ್ಯಕ್ತಿಗೆ ಕೊಟ್ಟಿದ್ದಾರೆ ಎಂದು ಗೂಗಲ್ ಮಾಡಿ. ಆ ವ್ಯಕ್ತಿ ಆದಾಯ ಎಷ್ಟು ಪಟ್ಟು ಹೆಚ್ಚಾಗಿದೆ ನೋಡಿ.
ಇನ್ನು ೨೦೨೨ರಲ್ಲಿ ಮೊರ್ಬಿ ಎನ್ನುವಲ್ಲಿ ಸೇತುವೆ ಉದ್ಘಾಟನೆಯಾದ ೫ ದಿನಗಳಲ್ಲಿ ಕುಸಿದು ಕನಿಷ್ಠ ೧೪೧ ಜನ ಸತ್ತರು ಎನ್ನುವ ಸುದ್ದಿ ನಾವೆಲ್ಲ ಓದಿದ್ದೇವೆ. ಆದರೆ ಆ ಸೇತುವೆ ರಿಪೇರಿ ಮಾಡಿದ ಕಂಪನಿ ಯಾವುದು ಗೊತ್ತಾ? ನಮ್ಮ ನಿಮ್ಮ ಮನೆಯಲ್ಲಿ ಇರುವ ಅಜಂತಾ ಗಡಿಯಾರದ ತಯಾರಕರು. ಗಡಿಯಾರಕ್ಕೂ ಸೇತುವೆಗೂ ಎಲ್ಲಿಯ ಸಂಬಂಧ? ಈ ಪ್ರಶ್ನೆಯನ್ನು ಕೇಳಬೇಕಾದ ಸರಕಾರ ಕೇಳಲಿಲ್ಲ ಅನಿಸುತ್ತದೆ - ಒಂದು ನೂರಾರು ಜನ ಸತ್ತರು.
ಹಾಗಾದರೆ ಇತ್ತೀಚೆ ನಮ್ಮ ದುಡ್ಡನ್ನು ಶ್ರೀಮಂತರಿಗೆ ಬಾಚಿ ಬಾಚಿ ಕೊಡುತ್ತಿದ್ದಾರಾ - ನನಗೆ ನಿಖರವಾಗಿ ಗೊತ್ತಿಲ್ಲ. ಆದರೆ...
ಸರಕಾರ ನಮಗಾಗಿ -ನಾಗರೀಕರಿಗಾಗಿ ಮಾಡುವ ವೆಚ್ಚಗಳಲ್ಲಿ ನಮ್ಮ ಮೇಲೆ ಸ್ಪೈ ಮಾಡುವದೂ ಸೇರಿದೆಯಾ? ಸ್ಪೈ ಮಾಡಿ ಪತ್ರಕರ್ತರ, ಸೆಲೆಬ್ರಿಟಿಗಳ, ನ್ಯಾಯಾಧೀಶರ ಬಾಯಿ ಮುಚ್ಚಿಸಿ ತಮ್ಮ ಗುಣಗಾನ ಮಾಡಿಸಿಕೊಳ್ಳುವ ವೆಚ್ಚ ಸೇರಿದೆಯಾ? ನನಗೆ ಗೊತ್ತಿಲ್ಲ?
Comments
Post a Comment