ಹಾಲಿಗೆ ಹುಳಿ ಹಿಂಡಿ

 ಹೆದರಬೇಡಿ. ನಾನು ಓಪನ್ ಆಗಿ ನನ್ನ ದೋಷಗಳನ್ನು ಹೇಳಿಕೊಳ್ತಾ ಇಲ್ಲ. ಶಬ್ದಶಃ ನುಡಿಯ ಅರ್ಥ ಹೇಳುತ್ತಿದ್ದೇನೆ.

ನೀವು ಭಾರತೀಯ ಮಹಿಳೆಯಾದರೆ ಒಮ್ಮೆಯಲ್ಲ ಒಮ್ಮೆ ನಾನು ಈಗ ಹೇಳುವ ಸಂಕಷ್ಟವನ್ನು ಅನುಭವಿಸಿದ್ದೀರಾ. ಬೆಳಿಗ್ಗೆ ಎದ್ದು ನೋಡಿದರೆ ಹಾಲು ಹೆಪ್ಪಾಗೇ ಇಲ್ಲ. ದಿನದಂತೆ ಹಾಲಿಗೆ ಹುಳಿ ಹಿಂಡಿ - ಅಂದರೆ ಹೆಪ್ಪು ಹಾಕಿ ನಿರಾಳವಾಗಿ ಮಲಗಿದ್ದಿರಿ. ಬೆಳಿಗ್ಗೆ ನೋಡಿದರೆ ಈ ಭಾನಗಡೆ.

ಈಗೇನು ಮಾಡಬೇಕಪ್ಪಾ. ಸ್ವಲ್ಪ - ಚೂರೇ ಚೂರು ಬಿಸಿ ಮಾಡಿದರೇ ಹಾಲು ಒಡೆಯಬಹುದು. ಬಿಸಿ ನೀರಲ್ಲಿ ಪಾತ್ರೆ ಇಟ್ಟರೆ ಹೆಪ್ಪಾಗದೇ ಉಳಿಯಬಹುದು. ಏನು ಮಾಡಬೇಕಪ್ಪ. ಒಂದು/ಅರ್ಧ ಲೀಟರ್ ಹಾಲು ಹಾಳು ಮಾಡಿದ ಪಶ್ಚಾತ್ತಾಪ ಒಂದು ಕಡೆ, ಇನ್ನು ದಿನವಿಡಿ ಬೇಕಾಗುವ ಮೊಸರಿಗೆ ಏನು ಮಾಡಬೇಕೆಂಬ ಸಂದಿಗ್ಧ ಇನ್ನೊಂದು ಕಡೆ. 

ಅಮ್ಮ ಹೇಳದರು - ರಾತ್ರಿ ಹೆಪ್ಪು ಹಾಕಿದ ಮೇಲೆ, ಆ ಪಾತ್ರೆಯ ಮೇಲೆ ಇನ್ನೊಂದು ಪಾತ್ರೆ ಮುಚ್ಚಿಡು. ಅದನ್ನು ಪ್ರಯತ್ನಿಸಿದೆ. ನನ್ನದೇ ಅವಿಷ್ಕಾರವಾದ - ಹೆಪ್ಪು ಹಾಕಿದ ಹಾಲಿನ ಬೋಗುಣಿ ಮೇಲೆ ಭಾರ ಹೇರಿ ನೋಡಿದೆ. ಕುಕರ್ ಒಳಗಡೆ ಹಾಲಿನ ಪಾತ್ರೆ ಇಟ್ಟು ನೋಡಿದೆ. 

ಉಹುಂ, ಏನು ಮಾಡಿದರೂ ಹಾಲು ಮೊಸರಾಗುತ್ತಿಲ್ಲ. ಕೈ ಚೆಲ್ಲಿ ಛಳಿಗಾಲವಿಡೀ ನಂದಿನಿ ಮೊಸರು ಅಂಗಡಿಯಿಂದ ತಂದು ಬಿಟ್ಟೆ. ನಂದಿನಿ ಮೊಸರು ದಪ್ಪಗೇನೋ ಇತ್ತು, ಆದರೆ ಏನೇನು ಹಾಕುತ್ತಾರೋ ದೇವರಿಗೇ ಗೊತ್ತು.

ಈ ವರ್ಷ ಒಂದು ಐಡಿಯಾ ಹೊಳೆಯಿತು. ಅಡಿಗೆ ಮನೆ ಮೂಲೆಯಲ್ಲಿ ಗುಮ್ಮಣ್ಣನಂತೆ ಕುಳಿತು ಸುಮ್ಮನೇ ಜಾಗ ತಿನ್ನುತ್ತಿರುವ ಮೈಕ್ರೋವೇವ್ ಓವನ್ ಯಾಕೆ ಉಪಯೋಗಿಸಬಾರದು? ಅದಕ್ಕೂ ಪಾಪ ತಾನು ನಿರುಪಯೋಗಿ ಅನಿಸಬಾರದು. 

ಅದಕ್ಕೂ ಒಂದು ಕಥೆ ಇದೆ. ೨೦೦೮ನೇ ಇಸವಿಯಲ್ಲಿ ತೊಗೋಂಡ ಆ ಡಬ್ಬವನ್ನು ನಾನು ಉಪಯೋಗಿಸುವದು - ಹುಣ್ಣಿಮೆಗೊಮ್ಮೆ, ಅಮವಾಸ್ಯೆಗೊಮ್ಮೆ. ಉಪ್ಪಿಟ್ಟು ಮಾಡುವಾಗ ರವೆ ಹುರಿಯಲು ಮತ್ತು ಹಾಗಿಲ ಕಾಯಿ ಪಲ್ಯ ಮಾಡಲು. ಶಿರಾ -ನಿಮ್ಮ ಕೇಸರಿಬಾತ್ ಮಾಡುವಾಗ ಹೇಗೆ ರವೆ ಹುರಿಯುತ್ತೇನೆ ಅಂತೀರಾ - ಅದನ್ ಮಾಡೋದೆ ಇಲ್ಲ. ನಮ್ಮವರಿಗೆ ಶುಗರ್, ನಂಗೇ - ನಂಗೆ ಘೋರ ಆಲಸಿತನ.

ಆದರೆ ಹಾಗಲಕಾಯಿ ಪಲ್ಯಕ್ಕೆ ಬಹಳ ಅನುಕೂಲ ಆಗುತ್ತದೆ. ನಮ್ಮ ಅಮ್ಮ ನಮಗೆ ಹೇಳಿಕೊಟ್ಟಿದ್ದು - ಹಾಗಿಲಕಾಯನ್ನು ತುಂಬಾ ಸಣ್ಣ ಹೋಳುಗಳಾಗಿ (ಕೊಚ್ಚಲು - ನಮ್ಮ ಶಬ್ಚ) ಕತ್ತರಿಸಿ, ನಂತರ ಅತೀ ಸಣ್ಣ ಬೆಂಕಿಯಲ್ಲಿ ಅದನ್ನು ತಾಸುಗಟ್ಟಲೇ ಹುರಿದು ಅದು ಗರಿಗರಿಯಾಗುವಂತೆ ಮಾಡಬೇಕು. ಕೊಚ್ಚಲು ಅರ್ಧ ತಾಸು, ಹುರಿಯಲು ಮತ್ತರ್ಧ ತಾಸು.

ನಾನು ಮೊದಲು ಹೇಳದಂತೆ ಸ್ವಲ್ಪ ಅಲ್ಲ, ಜಾಸ್ತೀನೇ ಸೋಂಬೇರಿ. ಸ್ವಿಗ್ಗಿ ಜಾಹಿರಾತಲ್ಲಿ ತೋರಿಸುವಂತೆ, ವೋ ವೋ ಕರತೇ ಹೈ ನ - ಅಂತಹ ಚೋಪರ್ ಎಳೆದು ಬಿಟ್ಟು ಹಾಗಿಲಕಾಯಿಯ ಚೂರು ಚೂರು ಮಾಡಿ, ಮೈಕ್ರೋವೇವಿನಲ್ಲಿ ಹುರಿದು, ಪಲ್ಯ ಮುಗಿಸಿಬಿಡುತ್ತೇನೆ. ಆಲಸ್ಯ ಕೆಟ್ಟದ್ದಾ - ನೀವೇ ಹೇಳಿ.

ಉಳಿದ ದಿನಗಳಲ್ಲಿ ಆ ಓವನ್ನು ಮೂಲೆಯಲ್ಲಿ ಮುದುಡಿಕೊಂಡು ಕುಳಿತಿರುತ್ತದೆ.  ಒಮ್ಮೊಮ್ಮೆ ತಂಗಳನ್ನ ಬಿಸಿಮಾಡಲು ಅದರಲ್ಲಿಟ್ಟರೆ, ಅದೇ ಸಂಭ್ರಮ ಆ ಒಲೆಗೆ, ಪಾಪ.

ವಾಪಸ್ ಹಾಲಿಗೆ ಹುಳಿ ಹಿಂಡುವದಕ್ಕೆ ಬರೋಣ. ಸರಿ, ಮಾಮೂಲಿನಂತೆ ಹೂಬಿಸಿ ಹಾಲಿಗೆ (ಏನು ಹಾಗೆಂದರೆ - ಹೂವು ಬಿಸಿ ಇರುವದಿಲ್ಲ. ಹೂವು ಬಾಡುವಷ್ಟು ಬಿಸಿಯೇ, ಮೊಗ್ಗು ಅರಳುವಷ್ಟು ಬಿಸಿಯೇ? ಗೊತ್ತಿಲ್ಲ) ಅರ್ಧ ಚಮಚ ಮೊಸರು ಹಾಕಿ ಮೈಕ್ರೋವೇವಲ್ಲಿ ಇಟ್ಟು ಬಾಗಿಲು ಹಾಕಿದೆ. ಸ್ವಿಚ್ ಆನ್ ಮಾಡಲಿಲ್ಲ - ನನಗೆ ಬೇಕಾಗಿರುವದು ಒಡೆದ ಹಾಲಲ್ಲ, ಹೆಪ್ಪಾದ ಹಾಲು.

ಬೆಳಿಗ್ಗೆ ನೋಡಿದರೆ ಗಟ್ಟಿ ಮೊಸರು ರೆಡಿಯಾಗಿ ಮುಗಳ್ನಗುತ್ತಾ ಇತ್ತು. 

ಯುರೇಕಾ ಅಂತ ಹೇಳಬೇಕಿತ್ತು - ಹೇಳಲಿಲ್ಲ. 

ಅಂದ ಹಾಗೇ ಮುಂದಿನ ವರ್ಷದ ನೋಬೆಲ್ ಪುರಸ್ಕಾರಕ್ಕೆ ನೋಮಿನೇಷನ್ ತೆಗೆದುಕೊಳ್ಳುತ್ತಾ ಇದ್ದಾರಾ?

Comments

Popular posts from this blog

ಹೂಗಳು

ಎಮ್ಮೆ

ಸೇಲ್