ಭಾರತದ ಅನ್ವೇಷಣೆ

ನಿನ್ನೆ ಒಂದು ಯೂಟ್ಯೂಬ್ ವಿಡಿಯೋ ನೋಡುತ್ತಾ ಇದ್ದೆ. ಅದರ ಕಂಟೆಂಟ್ ಕ್ರಿಯೇಟರ್ ನಮ್ಮ ದೇಶದ ಒಂದು ವಿವಾದಾತ್ಮಕ ರಾಜ್ಯಕ್ಕೆ ಅವನು ಹೋಗಿ ಅಲ್ಲಿ ಜನರ ಜೊತೆ ಸಂವಾದ ಮಾಡುತ್ತಾ ಇದ್ದ.

ಒಬ್ಬ ಹೇಳಿದ - ಅವರಲ್ಲಿ ಟ್ರಾನ್ಸಫಾರ್ಮರ್ ಪದೇ ಪದೇ ಸುಟ್ಟು ಹೋಗುತ್ತದೆ - ಯಾಕೆ? ಯಾಕೆಂದರೆ ಅಲ್ಲಿ ಕೇವಲ ದಿನದಲ್ಲಿ ಒಂದು ಗಂಟೆ ವಿದ್ಯುತ್ ಇರುತ್ತದೆ - ಆ ಸಮಯದಲ್ಲೇ ಎಲ್ಲಾ ಜನ ಅವರ ಕೆಲಸಗಳನ್ನೆಲ್ಲಾ ಮಾಡಲು ಪ್ರಯತ್ನ ಮಾಡುತ್ತಾರೆ. ಓವರ್ ಲೋಡಾಗಿ ಟ್ರಾನ್ಸಫಾರ್ಮರ್ ಪದೇ ಪದೇ ಸುಡುತ್ತದೆ. ಅವರು ಕಂಪ್ಲೇಟ್ ಮಾಡಿ ಮಾಡಿ ಸೋತು ತಮ್ಮ ದುಡ್ಡಲ್ಲೇ ಟ್ರಾನ್ಸಫಾರ್ಮರ್ ರಿಪೇರಿ ಮಾಡಿಸಿಕೊಳ್ಳುತ್ತಾರೆ.

ಇನ್ನೊಬ್ಬ ಹೇಳಿದ - ಅವರ ಹಳ್ಳಿಗೆ ವಿದ್ಯುತ್ ಬಂದಿದ್ದೇ ೨೦೧೬ರಲ್ಲಿ. ನಾನು ತೆರೆದ ಬಾಯಿ ಮುಚ್ಚಲಿಲ್ಲ. ನಮ್ಮ ಊರೂ ಕುಗ್ರಾಮವೇ - ಆದರೆ ಕರ್ನಾಟಕದ್ದು - ನನಗೆ ನೆನಪಿದೆ - ನಮ್ಮ ಹಳ್ಳಿಗಳಿಗೆ ಕರೆಂಟ್ ಬಂದಿದ್ದು  ಸುಮಾರರು ೧೯೭೫-೭೬ರಲ್ಲಿ. ಇವತ್ತಿಗೆ ಸುಮಾರು ಐವತ್ತು ವರ್ಷದ ಹಿಂದೆ.

ಅವರು ಪಾಪ ನಗುತ್ತ ಹೇಳುತ್ತಾರೆ - ನಾವು ಇನ್ನೂ ೧೯ನೇ ಶತಮಾನದಲ್ಲಿ ಇದ್ದೀವಿ.

ಅದಾಯಿತು ಬಿಡಿ - ಜನ ಅದಕ್ಕಿಂತ ಹೆಚ್ಚಾಗಿ ಗೋಳು ಹೇಳಿಕೊಳ್ಳುವದು ನೌಕರಿಯ ಬಗ್ಗೆ. ಯಾವುದೇ ತರಹದ ಸರಕಾರೀ ಅಥವಾ ಖಾಸಗಿ ನೌಕರಿಗಳಿಲ್ಲ. ಓದಿರುವ ಯುವಕ-ಯುವತಿಯರು ಮನೆಯಲ್ಲಿ ಖಾಲಿ ಕುಳಿತಿರುತ್ತಾರೆ. ಪಿ. ಎಚ್. ಡಿ. ಮಾಡಿದವರು ಸಹ ಕೆಲಸವಿಲ್ಲದೆ ಮನೆಯಲ್ಲಿದ್ದಾರೆ.

ಈ ಸಂದರ್ಭದಲ್ಲಿ ನಮಗೆ ರಾಜಕಾರಣಿಗಳ ಮಹತ್ವ ಗೊತ್ತಾಗುತ್ತದೆ. ಶಾಸಕರು, ಮಂತ್ರಿಗಳು ಏನು ಮಾಡುತ್ತಾರೆ ಅಂತೀವಲ್ಲಾ. ಅವರು ನಮ್ಮ ಹತ್ತಿರ ದಕ್ಷಿಣೆ ತೆಗೆದುಕೊಂಡು ನಮ್ಮ ಮಕ್ಕಳಿಗೆ ನೌಕರಿ ಕೊಡಿಸುತ್ತಾರೆ. ಈ ರಾಜ್ಯದಲ್ಲಿ ದುರದೃಷ್ಟವಶಾತ್ ಶಾಸನಸಭೆಯನ್ನೇ ರದ್ದು ಮಾಡಿಬಿಟ್ಟಿದ್ದಾರೆ. ಶಾಸಕರೂ ಇಲ್ಲ, ಮಂತ್ರಿಗಳೂ ಇಲ್ಲ, ನೌಕರಿಯೂ ಇಲ್ಲ.

ಅಂದ ಹಾಗೇ ಆ ವಿಡಿಯೋ ಧಾರಾವಹಿಯ ಹೆಸರು - ಭಾರತ್ ಏಕ್ ಖೋಜ್. ಇದೇ ಹೆಸರಿನಲ್ಲಿ ಇನ್ನೊಂದು ಟಿ.ವಿ. ಧಾರವಾಹಿ ಬರುತ್ತಿತ್ತು - ೯೦ರ ದಶಕದಲ್ಲಿ. ಅದು ಒಬ್ಬ ಪೂರ್ವ ಪ್ರಧಾನಿಯ ಪುಸ್ತಕವನ್ನು ಆಧರಿಸಿತ್ತು. 

ನನ್ನ ಅಭಿಪ್ರಾಯದಲ್ಲಿ ನಮ್ಮ ಭಾರತ ತುಂಬಾ ಸುಧಾರಿಸಿದೆ - ಶೈಕ್ಷಣಿಕವಾಗಿ, ತಾಂತ್ರಿಕವಾಗಿ, ಆರ್ಥಿಕವಾಗಿ. ಹೆಣ್ಣುಮಕ್ಕಳ ಪರಿಸ್ಥಿತಿ ಸಹಾ ಬಹಳವಾಗೇ ಸುಧಾರಿಸಿದೆ. ಆದರೆ ಈ ಸುಧಾರಣೆ ಕರ್ನಾಟಕಕ್ಕೆ ಮಾತ್ರ ಸೀಮಿತವೋ ಅಥವಾ ದಕ್ಷಿಣ ಭಾರತಕ್ಕೆ ಸೀಮಿತವೋ ನನಗೆ ಗೊತ್ತಿಲ್ಲ. 

ಜನಗಣತಿ ಮಾಡಿದರೆ, ಅದರ ಮಾಹಿತಿಗಳನ್ನು ಪ್ರಕಟಿಸಿದರೆ (ಅದನ್ನು ನಾವು ಓದಿದರೆ) ಗೊತ್ತಾಗಬಹುದೇನೋ. ಇಂತಹ ಸಂದರ್ಭದಲ್ಲಿ, ಯಾವುದೇ ಫಲಾಪೇಕ್ಷೆಯಿಲ್ಲದೇ ತಮ್ಮ ಸ್ವಂತ ಖರ್ಚಿನಲ್ಲಿ ದೇಶದ ಮೂಲೆ ಮೂಲೆಗೆ ಹೋಗಿ ಅಲ್ಲಿಯ ಕಷ್ಟ-ಸುಖಗಳನ್ನು ನಮಗೆಲ್ಲ ವರದಿ ಮಾಡುವ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ.

 

 


Comments

Popular posts from this blog

ಹೂಗಳು

ಎಮ್ಮೆ

Qui scribit bis legit