ವೇದಗಳು ಮತ್ತು ಋಗ್ವೇದ
ಬಹುತೇಕ ಹಿಂದೂಗಳು ವೇದಗಳನ್ನು ಧರ್ಮ ಗ್ರಂಥಗಳೆಂದು ನೋಡುತ್ತಾರೆ. ಇದು ನನಗೆ ಬಹಳ ದುರದೃಷ್ಟಕರ ಎನಿಸುತ್ತದೆ. ಏಕೆಂದರೆ ಹೀಗೆ ನೋಡಿದಾಗ ನಾವು ಅವುಗಳ ನಿಜವಾದ ಮಹತ್ವವನ್ನು ಗಮನಿಸುವದಿಲ್ಲ - ವೇದಗಳು ಆ ಪುರಾತನ ಕಾಲದಲ್ಲಿ, ಆರಂಭಿಕ ಹಂತಗಳಲ್ಲಿ ಮಾನವನ ಸ್ಥಿತಿ-ಗತಿ ಹಾಗೂ ಮನೋವೃತ್ತಿ ಹೇಗಿತ್ತೆಂದು ಹೇಳುತ್ತವೆ. ಆಹಾ, ಅದು ಎಂತಹ ಅದ್ಭುತ ಮನಸ್ಸಾಗಿತ್ತು!
ವೇದಗಳು (ವಿದ್= ತಿಳಿದುಕೊಳ್ಳುವುದ) ಮೂಲತಃ ಅಂದಿನ ಕಾಲದಲ್ಲಿರುವ ಎಲ್ಲಾ ಜ್ಞಾನದ ಸಂಗ್ರಹಗಳು; ಅವುಗಳಲ್ಲಿ ಹಲವು ವಿಷಯಗಳು ಕಲಸುಮೇಲೋಗರವಾಗಿವೆ: ಸ್ತೋತ್ರಗಳು, ಪ್ರಾರ್ಥನೆಗಳು, ಯಜ್ಞಗಳ ಆಚರಣೆಯ ವಿಧಿಗಳು, ಮಾಟ-ಮಂತ್ರಗಳು ಹಾಗೂ ಪ್ರಕೃತಿಯ ಮೇಲೆ ಅತಿ ಸುಂದರವಾದ ಕಾವ್ಯಗಳು ಇವೆಲ್ಲವುಗಳನ್ನೂ ವೇದಗಳಲ್ಲಿ ನೋಡಬಹುದು.
ಆಶ್ಚರ್ಯವೆಂದರೆ ವೇದಗಳಲ್ಲಿ ಮೂರ್ತಿ ಪೂಜೆಯ ಪ್ರಸ್ತಾಪವಿಲ್ಲ; ಅಲ್ಲಿಯ ದೇವತೆಗಳಿಗೆ ದೇವಾಲಯಗಳಿಲ್ಲ. ಆದರೆ ಈ ಗ್ರಂಥಗಳಲ್ಲಿ ಆದಮ್ಯ ಜೀವ ಚೈತನ್ಯ ವ್ಯಾಪಿಸಿದೆ. ವೈದಿಕ ಆರ್ಯರು ಜೀವನದ ಬಗ್ಗೆ ಅತೀ ಉತ್ಸಾಹ ಹೊಂದಿದ್ದ ಕಾರಣ, ಬಹುಶಃ ಆತ್ಮದ ಬಗ್ಗೆ ಹೆಚ್ಚು ಗಮನ ಹರಿಸಿಲಿಲ್ಲ. ಆದರೆ ಮರಣದ ನಂತರ ಯಾವುದೋ ಒಂದು ರೀತಿಯ ಅಸ್ತಿತ್ವವಿರಬಹುದೆನೋ ಎಂಬ ಅಸ್ಪಷ್ಟ ಕಲ್ಪನೆಯನ್ನು ಮಾತ್ರ ಹೊಂದಿದ್ದರು.
ಕಾಲ ಕ್ರಮೇಣ ದೇವರ ಪರಿಕಲ್ಪನೆ ಬೆಳೆಯುತ್ತಾ ಹೋಯಿತು: ಮೊದಮೊದಲು ಗ್ರೀಸ್ ದೇಶದಂತೆ ಒಲಿಂಪಿಯನ್ ಪ್ರಕಾರದ ಅನೇಕ ದೇವರುಗಳ ಪೂಜೆ (ಝೂಯಸ್ , ಪಾಸಿಡಾನ್ ಮತ್ತು ಹೇಡಿಸ್ ನ ಹಾಗೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವ) ಆರಂಭವಾಯಿತು, ಅದರ ನಂತರ ಏಕ ದೇವೋಪಾಸನೆ ಪ್ರಚಲಿತಕ್ಕೆ ಬಂತು. ಅದರ ನಂತರ ಅದ್ವೈತ ತತ್ವ ಮೂಡಿ ಬಂತು.
ಕಾಲ ಕ್ರಮೇಣ ದೇವರ ಬಗೆಗಿನ ಚಿಂತನೆಯ ಜೊತೆಗೆ ಅವರು ಪ್ರಕೃತಿಯ ನಿಗೂಢತೆಯ ಬಗ್ಗೆ ಚಿಂತಿಸತೊಡಗಿದರು. ತಾರ್ಕಿಕವಾಗಿ, ತತ್ವಜ್ಞಾನದ ಬಗ್ಗೆ ವಿಚಾರ ಮಾಡತೊಡಗಿದರು. ಇವೆಲ್ಲಾ ಬೆಳವಣಿಗೆಗಳು ಒಂದೆರಡು ವರುಷಗಳಲ್ಲಲ್ಲ - ನೂರಾರು ವರ್ಷಗಳ ಅವಧಿ ತೆಗೆದುಕೊಂಡಿತು. ಮತ್ತು ಅವರು ವೇದದ ಅಂತ್ಯವನ್ನು ತಲುಪುವ ಹೊತ್ತಿಗೆ (ವೇದಾಂತ), ಉಪನಿಷತ್ತುಗಳು ರಚಿತವಾಗತೊಡಗಿದವು.
ಋಗ್ವೇದ
ಋಗ್ವೇದದ ವೈದಿಕ ಸ್ತೋತ್ರಗಳನ್ನು ರವೀಂದ್ರನಾಥ ಟ್ಯಾಗೋರ್ ಅವರು ಹೀಗೆ ಹೇಳಿದ್ದಾರೆ "ಅಸ್ತಿತ್ವದ ಅದ್ಭುತ ವಿಸ್ಮಯಕ್ಕೆ ಜನರ ಸಾಮೂಹಿಕ ಪ್ರತಿಕ್ರಿಯೆಯ ಕಾವ್ಯಾತ್ಮಕ ಪುರಾವೆ ಇದು. ಆ ಪುರಾತನ ಕಾಲದಲ್ಲೇ, ಅದ್ಭುತ ಮತ್ತು ಸರಳ ಕಲ್ಪನಾಶಕ್ತಿ ಹೊಂದಿರುವ ಜನರು, ಜೀವನದಲ್ಲಿ ಅಂತರ್ಗತವಾಗಿ ಇರುವ ಅಪರಿಮಿತ ನಿಗೂಢತೆಯನ್ನು ನೋಡಿ ಜಾಗೃತರಾದರು. ಅವರು ಸರಳ ನಂಬಿಕೆಯಿಂದ ಪ್ರಕೃತಿಯ ಪ್ರತಿಯೊಂದು ಅಂಶ ಮತ್ತು ಶಕ್ತಿಗೂ ದೈವತ್ವವನ್ನು ಆರೋಪಿಸಿದರು. ಆದರೆ ಅವರ ಆ ನಂಬಿಕೆ ಧೈರ್ಯಶಾಲಿ ಮತ್ತು ಸಂತೋಷಕರವಾಗಿತ್ತು. ಜಗದ ನಿಗೂಢತೆ ಅವರ ಜೀವನವನ್ನು ವೃದ್ಧಿಸಿತೇ ಹೊರತು, ಅದನ್ನು ಗೊಂದಲಗೊಳಿಸಲಿಲ್ಲ. ಜಗತ್ತಿನ ವಿರೋಧಾಭಾಸಗಳ ವೈವಿಧ್ಯದ ಬಗ್ಗೆ ಬೌದ್ಧಿಕ ಚಿಂತನೆಯ ತೊಳಲಾಟವಿಲ್ಲದ್ದು ಈ ಜನಾಂಗದ ನಂಬಿಕೆ. ಆದರೂ ಒಮ್ಮೊಮ್ಮೆ ಅಂತಪ್ರಜ್ಞೆಯಿಂದ ಅವರಿಗೆ ಅರಿವಾಗಿ ಹೀಗೆ ಹೇಳುತ್ತಿದ್ದರು: “ಏಕಂ ಸತ್ ವಿಪ್ರಾ ಬಹುಧಾ ವದಂತಿ (ದೇವರೊಬ್ಬನೇ, ನಾಮ ಹಲವು)".
- ಮೊದಲು ಅಸ್ತಿತ್ವವಿರಲಿಲ್ಲ ಅಥವಾ ಅಸ್ತಿತ್ವದಲ್ಲಿಲ್ಲದ ಸ್ಥಿತಿ ಇರಲಿಲ್ಲ: ಗಾಳಿಯಿರಲಿಲ್ಲ, ಅದರಾಚೆಗೆ ಆಕಾಶವಿರಲಿಲ್ಲ. ಎಲ್ಲವನ್ನು ಏನು ಆವರಿಸಿತ್ತು? ಎಲ್ಲಿ ಆವರಿಸಿತ್ತು? ಯಾವುದು ಎಲ್ಲ ವಸ್ತುಗಳಿಗೆ ಆಶ್ರಯ ನೀಡಿತು? ಅಲ್ಲಿ ನೀರು ಇತ್ತೇ, ಅಗಾಧ ಆಳದ ನೀರು ಇತ್ತೇ?
ಆಗ ಸಾವು ಇರಲಿಲ್ಲ, ಅಮರತ್ವವೂ ಇರಲಿಲ್ಲ
ಆಗ ರಾತ್ರಿ ಹಗಲುಗಳ ಜ್ಯೋತಿಯೂ ಇರಲಿಲ್ಲ.
ಯಾರು ನಿರ್ಭಯವಾಗಿ ಮತ್ತು ಸ್ವಾವಲಂಬಿಯಾಗಿ ಉಸಿರಾಡುವನೋ.
ಆಗ ಅವನೊಬ್ಬನಿದ್ದನು, ಮತ್ತು ಬೇರೊಬ್ಬರೂ ಇರಲಿಲ್ಲ.- ಮೊದಲಿಗೆ ಕತ್ತಲೆಯಲ್ಲಿ ಆವೃತವಾದ ಕತ್ತಲೆ ಮಾತ್ರ ಇತ್ತು.ಎಲ್ಲವೂ ಬೆಳಕಿಲ್ಲದ ನೀರು ಮಾತ್ರವಾಗಿತ್ತು
ಕೊನೆಗೆ ಅಸ್ತಿತ್ವಕ್ಕೆ ಬಂದದ್ದು, ಶೂನ್ಯದಿಂದ ಆವ್ರತವಾದದ್ದು
ಶಾಖದಿಂದ ಹುಟ್ಟಿಕೊಂಡಿತು - ನಂತರ ಬಯಕೆ ಹುಟ್ಟಿಕೊಂಡಿತು, ಚೈತನ್ಯದ ಪ್ರಾಥಮಿಕ ಬೀಜ ಮತ್ತು ಮೊಳಕೆಯ ಬಯಕೆ. ತಮ್ಮ ಹೃದಯದ ಚಿಂತನೆಯಿಂದ ಹುಡುಕಿದ ಋಷಿಗಳು ಅಸ್ತಿತ್ವದಲ್ಲಿಲ್ಲದ ವಸ್ತುವಿನಲ್ಲಿ ಅಸ್ತಿತ್ವದ ರಕ್ತಸಂಬಂಧವನ್ನು ಕಂಡುಕೊಂಡರು.
- ಮತ್ತು ಅವರು ಶೂನ್ಯದಾದ್ಯಂತ ತಮ್ಮ ಹಗ್ಗವನ್ನು ವಿಸ್ತರಿಸಿದ್ದಾರೆ, ಮತ್ತು ಮೇಲೆ ಏನಿತ್ತು ಮತ್ತು ಕೆಳಗೆ ಏನಿತ್ತು ಎಂದು ತಿಳಿದಿದ್ದಾರೆ. ಮೂಲ ಶಕ್ತಿಗಳು ಫಲವತ್ತಾದ ಪ್ರಬಲ ಶಕ್ತಿಗಳನ್ನು ಮಾಡಿದವು. ಕೆಳಗೆ ಬಲವಿತ್ತು, ಮತ್ತು ಅದರ ಮೇಲೆ ಪ್ರಚೋದನೆ ಇತ್ತು.
- ಆದರೆ, ಯಾರಿಗೆ ಗೊತ್ತು, ಮತ್ತು ಯಾರು ಹೇಳಬಹುದು?ಇದೆಲ್ಲ ಎಲ್ಲಿಂದ ಬಂತು, ಮತ್ತು ಸೃಷ್ಟಿ ಹೇಗೆ ಸಂಭವಿಸಿತು?ದೇವರುಗಳು ಸ್ವತಃ ಸೃಷ್ಟಿಗಿಂತ ತಡವಾಗಿ (ಬಂದಿ)ದ್ದಾರೆ,
ಹಾಗಾದರೆ ಅದು ನಿಜವಾಗಿಯೂ (ಸೃಷ್ಟಿ) ಎಲ್ಲಿಂದ ಹುಟ್ಟಿಕೊಂಡಿತು ಎಂದು ಯಾರಿಗೆ ತಿಳಿದಿದೆ?
ಎಲ್ಲಾ ಸೃಷ್ಟಿಯು ಎಲ್ಲಿಂದ ಹುಟ್ಟಿಕೊಂಡಿತು,
ಯಾರು ಅದನ್ನು ರೂಪಿಸಿದ್ದಾನೋ,
ಯಾರು ಮೇಲೆ ಸ್ವರ್ಗದಿಂದ ಎಲ್ಲವನ್ನೂ ಅವಲೋಕಿಸುತ್ತಾನೋ
ಬಹುಶಃ ಅವನಿಗೆ ತಿಳಿದಿದೆ - ಅಥವಾ ಅವನಿಗೂ ತಿಳಿದಿಲ್ಲದಿರಬಹುದು.
Comments
Post a Comment