ಕೌರವೇಂದ್ರನ ಕೊಂದೆ ನೀನೆಂದ
ಬಹಳಷ್ಟು ದಿನ ಕುಮಾರವ್ಯಾಸ ಭಾರತದ ಈ ಸಾಲುಗಳು ಮನದ ಮೂಲೆಯಿಂದ ಬಂದು ಕಿವಿಯೊಳ ಹೊಕ್ಕು ಏನೋ ಒಂದು ದುಗುಡವನ್ನು ಉಂಟುಮಾಡುತ್ತವೆ.
ಕೃಷ್ಣ :
ಏನು ಹೇಳೈ ಕರ್ಣ ಚಿತ್ತ
ಗ್ಲಾನಿಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿ ಕೊಂಬುದು ಸೇರದೇ ನಿನಗೆ
ಹಾನಿಯಿಲ್ಲೆನ್ನಾಣೆ ನುಡಿ ದು
ಮ್ಮಾನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯ ಬಯಸುವನಲ್ಲ ಕೇಳೆಂದ (ಉದ್ಯೋಗ ಪರ್ವ, ೧೧ ಸಂಧಿ, ೧೩ ಪದ್ಯ)
ಅದಕ್ಕೆ ಕರ್ಣನ ಉತ್ತರ
ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ.
ಹೊರೆದ ದಾತಾರಂಗೆ ಹಗೆಗಳ
ಶಿರವನರಿದೊಪ್ಪಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ
ಎಂತಹ ಸನ್ನಿವೇಶ ಕರ್ಣನಿಗೆ ಅವನ ಜನ್ಮ ರಹಸ್ಯವನ್ನು ಹೇಳಿ ಅವನನ್ನು ಪಾಂಡವರ ಪರ ತಿರಿಗಿಸುವ ಪ್ರಯತ್ನ ಕೃಷ್ಣನದ್ದು. ನೀನು ಕುಂತಿಯ ಜ್ಯೇಷ್ಠ ಪುತ್ರ. ಯುದ್ಧ ಗೆದ್ದ ನಂತರ ನೀನೇ ರಾಜನಾಗುವೆ ಎಂದು ಮರುಳು ಮಾಡಲು ನೋಡುತ್ತಾ ಇದ್ದಾನೆ ಕೃಷ್ಣ.
ಜೊತೆಗೆ ಆನು ನಿನ್ನ ಅಪದಸೆಯ ಬಯಸುವನಲ್ಲ ಎಂಬ ಭರವಸೆ ಬೇರೆ!
ಆದರೆ ಕರ್ಣನ ಉತ್ತರ ನೋಡಿ - "ಹೊರೆದ ದಾತಾರ - ಎಲ್ಲರೂ ಸೂತಪುತ್ರ ಎಂದು ಹೀಗಳೆದು ಅವಮಾನಿಸಿದಾಗ, ಸಾಕಿ ಸಲಹಿದ ದುರ್ಯೋಧನನ ಋಣವನ್ನು, ಅರಿಗಳ - ಶತ್ರುಗಳ ತಲೆ ಕಡಿದೊಪ್ಪಿಸಿ , ತೀರಿಸಕೊಳ್ಳುವ ಭರದಲ್ಲಿದ್ದೆ. ಆದರೆ ನೀನು ಅವನನ್ನು ಕೊಂದೆ."
Comments
Post a Comment