ಪರೂಫ್

ನಮ್ಮ ಸರಕಾರ - ಪ್ರಜಾಪ್ರಭುತ್ವದ ಸರಕಾರ - ನಾವು ಚುನಾಯಿಸಿ ಆರಿಸಿ ಕಳಿಸಿರುವ ಸರಕಾರ - ಇರುವದು ನಮ್ಮ ಅನುಕೂಲಕ್ಕೋ, ಅನಾನುಕೂಲಕ್ಕೋ? ನಮಗೆ ಸಹಾಯ ಮಾಡಲೋ, ನಮಗೆ ಅಡಚಣೆ ಮಾಡಲೋ? ನಮ್ಮನ್ನು ರಕ್ಷಿಸಲೋ, ನಮ್ಮನ್ನು ಭಕ್ಷಿಸುಲೋ?

ನೀವೇ ಹೇಳಿ, ಯಾಕೆಂದರೆ ನಾನಂತೂ ಪೂರ್ವಾಗ್ರಹ ಪೀಡಿತಳು.

ನಮ್ಮ ಮನೆ, ೪೦ ವರ್ಷದಿಂದ ನಾವು ಬದುಕಿ ಬಾಳಿದ ಮನೆ, ನಮ್ಮ ಅಪ್ಪ-ಅಮ್ಮ ಬೆವರು ಸುರಿಸಿ ಕಟ್ಟಿಕೊಂಡ ಮನೆ, ನಮ್ಮದೆಂದು ಪ್ರೂಫ್ ಕೊಟ್ಟು ಅದರ ನೋಂದಣಿಯನ್ನು ಕಂಪ್ಯೂಟರಿನಲ್ಲಿ ಮಾಡಿಸಿಕೊಳ್ಳಬೇಕು. ಆದರೆ ನಿಮಗೆ ಹೇಗೆ "ಈ" ಖಾತೆ ಕೊಡಬೇಕು, ನಿಮ್ಮ ಮನೆಯ ಎದುರಿಗೆ ೫೦ ಅಡಿ ರಸ್ತೆಯೇ ಇಲ್ಲವಲ್ಲ ಎನ್ನುತ್ತಾರೆ.

ರಸ್ತೆ ಸಣ್ಣದು ಸ್ವಾಮಿ, ಆಗ-೪೦ ವರ್ಷಗಳ ಹಿಂದೆ ಎಲ್ಲಾ ರಸ್ತೆಗಳೂ ಸಣ್ಣವೇ ಇದ್ದವಲ್ಲ. ಸರಕಾರವೇ ಮನೆಯ ಪ್ಲಾನಿಗೆ ಪರವಾನಿಗೆ ಕೊಟ್ಟದ್ದೀರಲ್ಲ. ಅದು ದಾಖಲೆ ಅಲ್ಲವಾ? ವರ್ಷ-ವರ್ಷ ಮನೆ ಕಂದಾಯ ಕಟ್ಟುತ್ತಿದ್ದೇವೆ - ಕಟ್ಟಿಸಿಕೊಳ್ಳುತ್ತಿದ್ದಾರಲ್ಲ - ಆ ದಾಖಲೆ ಸಾಲದಾ? 

ಸರಕಾರ ಕಾಯಿದೆ ಬದಲಾಯಿಸಿದಾಗಲೆಲ್ಲ ನಾವು ನಮ್ಮ ಮನೆಯನ್ನು ಅದರ ಎದುರಿನ ರಸ್ತೆಯನ್ನು (ರಸ್ತೆ ಎಂಬ ಭ್ರಮೆಯನ್ನು) ಬದಲಾಯಿಸಬೇಕಾ?

ಜನಸೇವಕ - ಕೆಲವು ಅರ್ಧ ಪುಟದ ಜಾಹೀರಾತು ಬಂತು - ನೀವು ಫೋನ್ ಮಾಡಿ, ಜನಸೇವಕರು ನಿಮ್ಮ ಮನೆಗೇ ಬಂದು ಈ ಆಸ್ತಿಯ ದಸ್ತಾವೇಜು ಮಾಡಿಕೊಡುತ್ತಾರೆ. ಆದರೆ ಯಥಾ ಪ್ರಕಾರ ಈ ಸೌಲಭ್ಯ ಇರುವದು ರಾಜಧಾನಿ ಬೆಂಗಳೂರಿನಲ್ಲಿರುವವರಿಗೆ ಮಾತ್ರ. ಯಾಕೆ ಈ ತಾರತಮ್ಯ. ಬೆಂಗಳೂರಿನ ಜನಕ್ಕೆ ಜನಸೇವಕರೇ ಬೇಡ - ಅವರು ಫೋನ್ ಬಟನ್ ಒತ್ತಿದರೆ ಕ್ಯಾಬು ಬಂದು ಅವರನ್ನು ಬೇಕೆಂದಲ್ಲಿಗೆ ಒಯ್ಯುತ್ತದೆ. ಸಣ್ಣ ಊರಿನಲ್ಲಿರುವ ಹಿರಿಯ ನಾಗರೀಕರಿಗೇ ಇಂತಹ ಸೌಲಭ್ಯ ಬೇಕಿತ್ತು.

ಇನ್ನು ಬಿಹಾರದಲ್ಲಿ ಸರಕಾರ ವೋಟರ್ ಲಿಸ್ಟ್  ತಿದ್ದುಪಡಿ ಮಾಡುತ್ತಿದೆ. ಆ ಪ್ರವಾಹ ಪರಿಸ್ಥಿತಿಯಲ್ಲಿ ಜನರು ನದಿ ದಾಟಿ ಪ್ರೂಫ್ ಸಂಗ್ರಹ ಮಾಡಬೇಕು, ಆಧಾರ ಕಾರ್ಡು, ರೇಶನ್ ಕಾರ್ಡು, ವೋಟರ್ ಕಾರ್ಡು (ಇದ್ಯಾವದೂ ನಾಗರೀಕತೆಯ ಪ್ರೂಫೇ ಅಲ್ಲವಂತೆ - ಇಲೆಕ್ಷನ್ ಕಮಿಶನ್ ಕೋರ್ಟಲ್ಲಿ ಹೇಳಿಕೊಂಡಿದೆ) . ಮಾಡುವ ಕೆಲಸ ಕಾರ್ಯ ಬಿಟ್ಟು ಓಡಾಡುತ್ತಲೂ ಇದ್ದಾರೆ.- ಭಯ ತಾನೇ? ಯಾರಿಗೆ ತಾನೆ ಸ್ವದೇಶದಲ್ಲಿ ಇದ್ದು ಪರದೇಶಿಯೆಂದು ಹೇಳಿಸಿಕೊಂಡು ಗಡೀಪಾರಾಗಲು ಇಷ್ಟ? 

ಬಿಹಾರ ತಾನೆ ಎಂದು ತಾತ್ಸಾರ ಮಾಡಬೇಡಿ - ನಾಳೆ ನಮ್ಮನೆಗೂ ಬರುತ್ತಾರೆ - ನೀವು ಭಾರತೀಯರೆಂದು ಯಾವ ಗ್ಯಾರಂಟೆ ಎಂದು ಕೇಳುತ್ತ. (ಅವರು ಮಾಡುವ ಉಪದ್ಯಾಪ ಎಲ್ಲ ಸಹಿಸಿಕೊಂಡು ಇನ್ನೂ ಸುಮ್ಮನಿದ್ದೇವಲ್ಲ - ಅದೇ ದೊಡ್ಡ ಪ್ರೂಫ್ ಅಲ್ಲವೇ)

ಇನ್ನೊಮ್ಮೆ ಕೇಳುತ್ತಿದ್ದೇನೆ - ನಮ್ಮ ಸರಕಾರ ನಮ್ಮ ಅಮ್ಮನೋ - ಅಥವಾ ಗುಮ್ಮನೋ? 

Comments

  1. ಲೇಖನ ಚೆನ್ನಾಗಿದೆ.

    ReplyDelete
    Replies
    1. ಧನ್ಯವಾದಗಳು

      Delete

Post a Comment

Popular Posts