ಅರಸನ ಆಜ್ಞೆ
ಅರಸನ ಆಜ್ಞೆ ಇಲ್ಲ - ದೆವ್ವದ ಕಾಟ ಇಲ್ಲ
ಮದುವೆಯಾದಾಗಿಂದ ವಿಭಕ್ತ - ಅವಿಭಕ್ತ ವಿರುದ್ಧ ಅದೇ ತಾನೇ - ಚಿಕ್ಕ ಕುಟುಂಬದ ಯಜಮಾನತಿಯಾಗಿರುವ ನನಗೆ ಅರಸನ ಆಜ್ಞೆ ಇರಲಿಲ್ಲ - ದೆವ್ವದ ಕಾಟ ಇರಲಿಲ್ಲ.
ಈಗ ಬೇರೇ ಸ್ಥಿತಿ. ಆಜ್ಞೆ ಇಲ್ಲದೇ ಹೋದರೂ ಕಾಟ ಮಾತ್ರ ಸುಮಾರು ಇದೆ.
ಮನೆಯಂಗಳವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು - ದಿನವೂ ಮೂರು ಜನ ಗುಡಿಸಿ - ಸಾರಿಸಿ ಅಲಂಕರಿಸಬೇಕು. ಮೂರು ಜನ - ನಾನು, ಮನೆಯವರು ಹಾಗೂ ಕೆಲಸದವಳು ಪ್ರತಿದಿನ ಗುಡಿಸುತ್ತೇವೆ - ಯಾಕೇ - ನೆರೆ-ಹೊರೆ ದಿನವಿಡೀ ಕಣ್ಣೆಲ್ಲ ಇಲ್ಲೇ ಇಟ್ಟಿರುತ್ತಾರಲ್ಲಾ - ಅವರಿಗೆ ನೋಡಲು ಚಂದ ಕಾಣಬೇಕು ತಾನೇ?
ಇನ್ನು ಮನೆಯೊಳಗೋ - ಸ್ವಲ್ಪ ಹೆಚ್ಚು ಕಮ್ಮಿ ನಡೆಯುತ್ತದೆ - ಯಾರು ನೋಡುತ್ತಾರೆ, ಯಾರು ಹೇಳುತ್ತಾರೆ? ಅತ್ತೆಯೋ ಮೇಲೆ ಶಿವನ ಪಾದ ಸೇರಿಯಾಗಿದೆ. ಸೊಸೆ ದೂರದೂರಲ್ಲಿ ಕುಳಿತಿದ್ದಾಳೆ. ಹಾಗಾಗಿ ನಾನು ಸುಂದರವಲ್ಲ, ಫಂಕ್ಷನಲ್ ಅಡಿಗೆಮನೆ ನಡೆಸಿಕೊಂಡು ಬರುತ್ತಿದ್ದೆ.
ಆದರೆ ಈಗ ಇಲ್ಲೂ ಕಾಟ ಆರಂಭ - ಈ ಐದಡಿ ಅರವತ್ತು ಕಿಲೋ ತೂಕವನ್ನು ಹೆದರಿಸುತ್ತಾ ಇರುವದು ಅಣು-ರೇಣುವಿನ ಗಾತ್ರದ ಇರುವೆ. ಅರೆ ಕ್ಷಣ ಆಲಸ್ಯದಿಂದ ಕಸ-ಗಿಸ ಅಡಿಗೆ ಮನೆಯಲ್ಲಿ ಬಿಟ್ಟರೆ - ಬಂದು ಬಿಡುತ್ತದೆ - ಸೈನ್ಯ - ಅನಾದಿ-ಅನಂತದ ಸಾಲು. ಸಕ್ಕರೆ, ಬೆಲ್ಲ, ಹಾಲು, ಕಡೆಗೆ ಅನ್ನಕ್ಕೂ ಲಗ್ಗೆ ಇಟ್ಟು ಸಮರ ಘೋಷಣೆ ಮಾಡಿಬಿಡುತ್ತದೆ.
ಹಾಗಾಗಿ ಅನಿವಾರ್ಯವಾಗಿ ಸುಂದರ, ಸ್ವಚ್ಛ ಮನೆಯನ್ನು ಮಾನೇಜ್ ಮಾಡುತ್ತಾ ಇದ್ದೇನೆ.
ಲೇಖನ ಚೆನ್ನಾಗಿದೆ. ಹೀಗೇ ಲಲಿತಪ್ರಬಂಧಗಳನ್ನು ನೀವು ಯಾಕೆಬರೆಯಬಾರದು?
ReplyDeleteಧನ್ಯವಾದಗಳು. ನನಗೇನೋ ಬರೆಯಲು ಆಸೆ, ಆದರೆ ನೆಟ್ ಫ್ಲಿಕ್ಸ್ ಬಿಡಬೇಕಲ್ಲಾ!
ReplyDelete