Search

ಧರ್ಮದ ಉದಯ

 ಇಷ್ಟು ವರ್ಷಗಳ ನಂತರ ನನಗೆ ಒಂದು ವಿಷಯ ಸ್ಪಷ್ಟವಾಗುತ್ತಾ ಇದೆ. ಧರ್ಮ-ದೇವರುಗಳ ಮೂಲ ಸಂಸ್ಥಾಪಕಿ ನಮ್ಮ-ನಿಮ್ಮ ಹಾಗೆ ವಯಸ್ಸಾದ ಮಹಿಳೆ. ಜೀಸಸ್ ಅಲ್ಲ, ಬುದ್ಧ ಅಲ್ಲ, ಮಹಮದ್ ಅಲ್ಲ, ಬಸವಣ್ಣನಲ್ಲ. 

ನೀವು ಖಂಡಿತ ಒಪ್ಪಿಕೊಳ್ಳವದಿಲ್ಲ ತಾನೇ? ಸ್ವಲ್ಪ ವಿಶ್ಲೇಷಿಸಿ ನೋಡೋಣ.

ಶಾಂತಮ್ಮ - ಹಾಗೆಂದು ಹೆಸರಿಡೋಣ ನಮ್ಮ ಸಂಸ್ಥಾಪಕಿಗೆ. ಅವಳಿಗೆ ಚಾಲೀಸು, ಪಚಾಸು ಎಲ್ಲ ಯಾವಾಗಲೋ ದಾಟಿದೆ. ಮಕ್ಕಳು-ಮೊಮ್ಮಕ್ಕಳೆಲ್ಲ ದೊಡ್ಡವರಾಗಿ ಅವರವರ ಗೂಡು ಸೇರಿದ್ದಾರೆ. ಮನೆಯಲ್ಲಿರವವರು ಅವಳು, ಗಂಡ. ಎಲ್ಲೋ ಒಂದಿಷ್ಟು ಜಿರಲೆ, ಹಲ್ಲಿ, ಇರುವೆಗಳು ಕಂಪನಿ ಕೊಡುತ್ತಿವೆ.

ದಿನದಲ್ಲಿ ೩-೪ ಗಂಟೆ ಅಡಿಗೆ-ಕಸ-ಮುಸುರೆ ಮಾಡಿದ ನಂತರ ಅವಳ ಕೈ, ಮನಸ್ಸು ಎಲ್ಲಾ ಖಾಲಿ. ಟಿ.ವೀ., ಮೊಬೈಲ್ ನೋಡುತ್ತ, ಬೇಜಾರಾದರೆ ಗೋಡೆ ನೋಡುತ್ತ ಕುಳಿತು ಅಲ್ಲೇ ನಿದ್ದೆ ಬಂದಿದೆ.

ಅರೆ ನಿದ್ರೆ, ಅರೆ ಕನಸಿನಲ್ಲಿ ಏನೋ ನೋಡುತ್ತಾಳೆ - ಅದು ನಿಜವಾದ ಕನಸಾ, ಅಥವಾ ನೋಡಿರುವ ಸಾವಿರಾರು ಸೀರಿಯಲ್ಲುಗಳ ಕಲಸುಮೇಲೋಗರವಾ ಗೊತ್ತಿಲ್ಲ.

ಒಂದು ವ್ಯಕ್ತಿ ಕಾಣುತ್ತಾನೆ - ಅವನ ತಲೆಯ ಸುತ್ತ ಬೆಳಕು (ಅಷ್ಟು ಹೊತ್ತಿಗೆ ಒಂದರೆಕ್ಷಣ ದೊಡ್ಡ ಬಿಸಿಲು ಬಂತಾ ?). ಅವನು ಏನೋ ಹೇಳುತ್ತಿದ್ದಾನೆ. ಅವಳಿಗೆ ಸರಿಯಾಗಿ ಕೇಳಿಸುತ್ತಿಲ್ಲ. ಕೊನೆಯಲ್ಲಿ ಅಭಯ ಹಸ್ತ ತೋರಿಸಿ ಮಾಯವಾಗುತ್ತಾನೆ. ಪೊಲಿಟಿಶಿಯನ್ನಾ?

ಎದ್ದ ಶಾಂತಮ್ಮ ಕನಸು ನೆನಪಿಸಿಕೊಳ್ಳಲು ನೋಡುತ್ತಾಳೆ - ಎಲ್ಲಾ ಅರೆಸ್ಪಷ್ಟ. ಏನಿರಬಹುದು - ಯಾರಿರಬಹುದು? 

ಆಹಾ, ದೇವರು! ನಿರ್ಧರಿಸಿಬಿಡುತ್ತಾಳೆ ಶಾಂತಮ್ಮ. ಏನೋ ಅಡಿಗೆಯ ಶಾಸ್ತ್ರ ಮಾಡಿ ನೆನಪಿಸಿಕೊಳ್ಳುತ್ತ,. 

ಸಂಜೆ ವಾಕಿಂಗ್ ಹೋದಾಗ ತನ್ನ ನೆರೆ-ಹೊರೆಯ ಗೆಳತಿಯರಿಗೆ ಹೊಸ ಸುದ್ದಿ ಹೇಳುತ್ತಾಳೆ "ನನ್ನ ಕನಸಿನಲ್ಲಿ ದೇವರು ಬಂದಿದ್ದ. ಅವನ ಸುತ್ತ ಬೆಳಕು ಕುಣಿಯುತ್ತಿತ್ತು. ಅವನಿಗೆ ನಾಲ್ಕು ಕೈಗಳು, ಸುಂದರ ಮುಖ, ಕಾರುಣ್ಯ ತುಂಬಿದ ಕಣ್ಣುಗಳು. ನನಗೆ ಅಭಯ ಹಸ್ತ ತೋರಿ ಆಶೀರ್ವಾದ ಮಾಡಿದ. ನನ್ನ ಉಪದೇಶವನ್ನು, ನನ್ನ ಮಾತುಗಳನ್ನು ಎಲ್ಲರಿಗೂ ತಲುಪಿಸು ಎಂದ."

ಅವಳ ಗೆಳತಿಯರು ಮುಖದಲ್ಲಿರುವ ಅಪನಂಬಿಕೆಯನ್ನು ಅಡಗಿಸುವ ಪ್ರಯತ್ನವನ್ನೂ ಮಾಡದೇ ಪ್ರಶ್ನಿಸಿದರು. "ಅವನ ಉಪದೇಶ ಏನು? ಏನು ಮಾಡಬೇಕಂತೆ?" ಸೊಟ್ಟ ನಗುತ್ತ ಕೇಳದಳು ನಳಿನಿ. "ಸುಳ್ಳು ಹೇಳಬಾರದಂತೆ." ಒಂದು ಮುತ್ತು ಉದುರಿಸಿದಳು ಶಾಂತಮ್ಮ. ನಳಿನಿಗೆ ತಾಗುವಂತೆ. ಅವರಿಗೆಲ್ಲ ಗೊತ್ತು ನಳಿನಿ ಉತ್ಪ್ರೇಕ್ಷಾಲಂಕಾರವನ್ನು ಬಹಳ ಉಪಯೋಗಿಸುತ್ತಾಳೆ ಎಂದು. "ಆಮೇಲೆ ಇನ್ನೇನು ಮಾಡಬೇಕಂತೆ" ನಗುತ್ತ ಕೇಳಿದಳು ಜಗಳಗಂಟಿ ಹರಿಣಿ. "ಬೇರೆಯವರ ಮನಸ್ಸು ನೋಯಿಸಬಾರದಂತೆ" ಶಾಂತಮ್ಮ ಹೇಳಿದಳು. ಹರಿಣಿಯ ಬಾಯಿ ಬಂದಾಯ್ತು. "ವೃಥಾ ಕಾಲಹರಣ ಮಾಡಬಾರದಂತೆ. ದಿನವೂ ನಿಮ್ಮ ಇಷ್ಟದೇವತೆಯ ಗುಡಿಗೆ ಇಪ್ಪತ್ತು ಪ್ರದಕ್ಷಿಣೆ ಮಾಡಬೇಕಂತೆ. ಐವತ್ತು ಪಂಚಾಕ್ಷರಿ, ಐವತ್ತು ಅಷ್ಟಾಕ್ಷರಿ ಜಪಿಸಬೇಕಂತೆ." ಹೇಳುತ್ತಲೇ ಹೋದಳು ಶಾಂತಮ್ಮ.

"ಇವಿಷ್ಟು ಮಾಡಿದರೆ ಮಂಡಿ ನೋವು, ಭುಜ ನೋವು, ಕಾಲು ನೋವು ಯಾವುದೂ ಬರುವದಿಲ್ಲವಂತೆ" ಎನ್ನುತ್ತ ಮಾತು ಮುಗಿಸಿದಳು. ನೋವು ಎಂದ ತಕ್ಷಣ ಅವರೆಲ್ಲರ ಕಿವಿ ಚುರುಕಾಯಿತು. ಹೂಂ ನೋಡಬಹುದು. ಇವೆಲ್ಲಾ ಮನೆಯಲ್ಲೇ ಕುಳಿತು ಮಾಡುವಂತವವು. ಮಕ್ಕಳನ್ನು ದುಡ್ಡು ಕೊಡಿ ಎಂದು ಕೇಳಬೇಕಾಗಿಯೂ ಇಲ್ಲ. ಗುಡಿಗೆ ಹೋದರೆ ಸ್ವಲ್ಪ ವಾಕಿಂಗೂ ಆಗುತ್ತದೆ.  ಎಂದುಕೊಳ್ಳುತ್ತ ಎಲ್ಲರೂ ಅವರವರ ಮನೆಗೆ ಬಂದರು.

ಹೀಗೆ ಶುರುವಾಯಿತು ನೋಡಿ ಶಾಂತಧರ್ಮ. 

Comments

  1. ಭಾರೀ ಚಲೊ ಆಜು. ಆದರೆ ನಾಯಕಿ ಒಂದ್ಸಲ ಜಯಮ್ಮ ಕಡಿಗೆ ಶಾಂತಮ್ಮ ಹೇಂಗೆ?

    ReplyDelete
    Replies
    1. ಧನ್ಯವಾದಗಳು. ಹೆಸರುಗಳಲ್ಲಿ ಕನ್‌ಫ್ಯೂಶನ್ ಆಯಿತು - ಮರವು. ಈಗ ಸರಿ ಮಾಡಿದೆ, ನೋಡಿ.

      Delete

Post a Comment

Popular Posts