ಧರ್ಮ ಹಾಗೂ ವಿಜ್ಞಾನ
ಧರ್ಮದ ಉದಯದ ಬಗ್ಗೆ ನಾನು ಬಹಳ ಸಲ ಯೋಚಿಸಿದ್ದೇನೆ - ಬರೆಯಲೂ ಬರೆದಿದ್ದೇನೆ. ಬಹಳ ಲೇಖಕರು, ಬೇರೆ ಬೇರೆ ಭಾಷೆಯಲ್ಲಿ "ದೇವರು, ಧರ್ಮಗಳು ಮನುಷ್ಯನಿಗೆ ಯಾಕೆ ಬೇಕಾದವು? ಹೇಗೆ ಅವನು ಪ್ರಾಕೃತಿಕ ಶಕ್ತಿಗಳನ್ನು, ಅವುಗಳ ಉಪಯುಕ್ತತೆ ಹಾಗೂ ಭೀಕರತೆಯನ್ನು ನೋಡಿ ಪೂಜಿಸಲು ಆರಂಭಿಸಿದ" ಎಂಬ ವಿಷಯದ ಬಗ್ಗೆ ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ.
ಆದರೆ ಇವತ್ತು ನಾನು ಹೇಳಲು ಹೊರಟಿರುವದು ಧರ್ಮದ ಪ್ರಚಲಿತತೆಯ ಬಗ್ಗೆ. ಧರ್ಮಗಳು ಎಷ್ಟೋ ಸಾವಿರ ವರ್ಷಗಳಿಂದ ಮನುಷ್ಯನಿಗೆ ಬೆಂಗಾವಲಾಗಿ, ಊರುಗೋಲಾಗಿ ಸಹಾಯ ಮಾಡುತ್ತಿವೆ. ಇಂದಿನ ಈ ವೈಜ್ಞಾನಿಕ ಯುಗದಲ್ಲಿ, ಮನುಷ್ಯನ ಜ್ಞಾನಕ್ಕೆ, ಜ್ಞಾನದ ಅರ್ಜನೆಗೇ ಮಿತಿಯೇ ಇಲ್ಲದಿರುವಾಗಲೂ ಸಹ ಅವನು ಧರ್ಮದ ಶರಣು ಹೋಗುತ್ತಿದ್ದಾನೆ - ಯಾಕೆ?
ಮತ್ತೆ 'ನಾನು ಹೋದರೆ ಹೋಗಬಹುದು' ಎಂಬ ಮಾತಿಗೆ ಹೋಗೋಣ. ಧರ್ಮ ಮನುಷ್ಯನ ದೃಷ್ಟಿಯನ್ನು ಬಾಹ್ಯಕ್ಕೆ ತಿರುಗಿಸುತ್ತದೆ. ಯಾವ ಧರ್ಮವನ್ನೇ ನೋಡಿ - ಅವರು ಉಪದೇಶಿಸುವದು "ದಾನ, ಧರ್ಮ ಮಾಡಿ, ಇತರರಿಗೆ ಸಹಾಯ ಮಾಡಿ, ಅತಿ ಆಸೆ ಮಾಡಬೇಡಿ" ಎಂಬುದನ್ನೇ . ಬಸವಣ್ಣನವರ ವಚನವನ್ನು ನಮ್ಮ ಬಾಲ್ಯದಲ್ಲಿ ಕಲಿತೆವಲ್ಲ "ಕಳಬೇಡ, ಕೊಲಬೇಡ, ಹುಸಿಯ ನುಡಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ.".
ಎಲ್ಲಾ ಧರ್ಮಗಳೂ ಅದನ್ನೇ ಹೇಳುತ್ತವೆ. ನಮ್ಮ ಹೊರತು ಇತರರ ಸುಖ ದುಃಖಗಳಿಗೆ ಸ್ಪಂದಿಸಿ ಎಂದು. ಶ್ಲೋಕ ಇದೆಯಲ್ಲ "ಸರ್ವೇ ಭವಂತು ಸುಖಿನಃ - ಎಲ್ಲರೂ ಸುಖಿಗಳಾಗಲಿ".
ಹೀಗೆ ಬಾಯಲ್ಲಿ ಹೇಳಿ ಹೇಳಿ - ಕೆಲವೊಮ್ಮೆ ಅದು ನಮ್ಮ ಮನದೊಳಗೆ ಹೊಕ್ಕುಬಿಡುವದೇನೋ. (ನನಗೆ ನಿಖರವಾಗಿ ಗೊತ್ತಿಲ್ಲ. ನಾನು ಅಷ್ಟೊಂದು ಧಾರ್ಮಿಕಳಲ್ಲ). ಆಗ ನಾವು ನಮ್ಮನ್ನು 'ನಾನು' ಎಂಬ ಕೂಪದಿಂದ ಹೊರಗೆ ಬರುತ್ತೇವೆ. ಅಷ್ಟಾದರೆ ಸಾಕು - ಬಹಳಷ್ಟು ಸಮಾಧಾನ, ನೆಮ್ಮದಿಗಳು ಸಿಕ್ಕುತ್ತವೆ. ಖಿನ್ನತೆ, ಆತಂಕಗಳು ಕಡಿಮೆಯಾಗುತ್ತವೆ.
ಈಗ ವಿಜ್ಞಾನವನ್ನು ನೋಡೋಣ - ವಿಜ್ಞಾನಿ ಬಹಳಷ್ಟು ಸಲ ಸ್ವಾರ್ಥವಿಲ್ಲದೇ ಲೋಕ ಕಲ್ಯಾಣಕ್ಕಾಗಿ, ಇತರರಿಗಾಗಿ ಶ್ರಮಿಸುತ್ತಾನೆ. ಎಡಿಸನ್ ವಿದ್ಯುತ್ ದೀಪಗಳನ್ನು ಕಂಡುಹಿಡಿದದ್ದೂ ನೂರಾರಾ ವರುಷವಾದರೂ ಎಷ್ಟು ಕೋಟಿ ಕೋಟಿ ಜನರಿಗೆ ಸಹಾಯ ಮಾಡುತ್ತಿದೆ. ಮೇಡಂ ಕ್ಯೂರಿ ರೇಡಿಯಂ ಕಂಡು ಹಿಡಿದು ವಿಕಿರಣ ಕ್ಷೇತ್ರಕ್ಕೆ ನಾಂದಿ ಹಾಡಿದಳು (ನಂತರ ವಿಕಿರಣದಿಂದಾದ ರಕ್ತಹೀನತೆಯಿಂದಲೇ ಮರಣ ಹೊಂದಿದಳು. )
ವಿಜ್ಞಾನಿಗಳು ಮನುಷ್ಯನ ಜೀವನದ ಕಷ್ಟಗಳನ್ನು, ಸಮಸ್ಯೆಗಳನ್ನು ಕಡಿಮೆ ಮಾಡಲು ಹಗಲಿರುಳು ಸತತವಾಗಿ ಶ್ರಮಿಸುತ್ತಾರೆ. ಧಾರ್ಮಿಕರು ಮನುಷ್ಯನ ಮನದ ಶಾಂತಿಗಾಗಿ ಪ್ರಯತ್ನಿಸುತ್ತಾರೆ.
ಹಾಗೆಂದು ಎರಡೂ ಕ್ಷೇತ್ರದಲ್ಲೂ ಅವರ ಜ್ಞಾನವನ್ನು, ಅವರ ಶಕ್ತಿಯನ್ನು, ಅವರ ಪ್ರಭಾವವನ್ನು ದುರುಪಯೋಗ ಪಡಿಸಿಕೊಳ್ಳುವವರು ಕೆಲವರು ಇದ್ದೇ ಇದ್ದಾರೆ.
ಶ್ರೀಕೃಷ್ಣ ಹೇಳಿದಂತೆ - ನಾವು ಕರ್ಮಯೋಗವನ್ನು ಮಾಡಿ ನಮ್ಮ ಜ್ಞಾನದಿಂದ ಇತರರಿಗೆ ಸಹಾಯ ಮಾಡಬಹುದು. ಅಥವಾ ಭಕ್ತಿ ಯೋಗದಿಂದ ಮನಶ್ಶಾಂತಿಯನ್ನು ಪಡೆಯಬಹುದು. ಆಯ್ಕೆ ನಮ್ಮದು.
Comments
Post a Comment