ಹಾಲಿಗೆ ಹುಳಿ ಹಿಂಡಿ
ಹೆದರಬೇಡಿ. ನಾನು ಓಪನ್ ಆಗಿ ನನ್ನ ದೋಷಗಳನ್ನು ಹೇಳಿಕೊಳ್ತಾ ಇಲ್ಲ. ಶಬ್ದಶಃ ನುಡಿಯ ಅರ್ಥ ಹೇಳುತ್ತಿದ್ದೇನೆ. ನೀವು ಭಾರತೀಯ ಮಹಿಳೆಯಾದರೆ ಒಮ್ಮೆಯಲ್ಲ ಒಮ್ಮೆ ನಾನು ಈಗ ಹೇಳುವ ಸಂಕಷ್ಟವನ್ನು ಅನುಭವಿಸಿದ್ದೀರಾ. ಬೆಳಿಗ್ಗೆ ಎದ್ದು ನೋಡಿದರೆ ಹಾಲು ಹೆಪ್ಪಾಗೇ ಇಲ್ಲ. ದಿನದಂತೆ ಹಾಲಿಗೆ ಹುಳಿ ಹಿಂಡಿ - ಅಂದರೆ ಹೆಪ್ಪು ಹಾಕಿ ನಿರಾಳವಾಗಿ ಮಲಗಿದ್ದಿರಿ. ಬೆಳಿಗ್ಗೆ ನೋಡಿದರೆ ಈ ಭಾನಗಡೆ. ಈಗೇನು ಮಾಡಬೇಕಪ್ಪಾ. ಸ್ವಲ್ಪ - ಚೂರೇ ಚೂರು ಬಿಸಿ ಮಾಡಿದರೇ ಹಾಲು ಒಡೆಯಬಹುದು. ಬಿಸಿ ನೀರಲ್ಲಿ ಪಾತ್ರೆ ಇಟ್ಟರೆ ಹೆಪ್ಪಾಗದೇ ಉಳಿಯಬಹುದು. ಏನು ಮಾಡಬೇಕಪ್ಪ. ಒಂದು/ಅರ್ಧ ಲೀಟರ್ ಹಾಲು ಹಾಳು ಮಾಡಿದ ಪಶ್ಚಾತ್ತಾಪ ಒಂದು ಕಡೆ, ಇನ್ನು ದಿನವಿಡಿ ಬೇಕಾಗುವ ಮೊಸರಿಗೆ ಏನು ಮಾಡಬೇಕೆಂಬ ಸಂದಿಗ್ಧ ಇನ್ನೊಂದು ಕಡೆ. ಅಮ್ಮ ಹೇಳದರು - ರಾತ್ರಿ ಹೆಪ್ಪು ಹಾಕಿದ ಮೇಲೆ, ಆ ಪಾತ್ರೆಯ ಮೇಲೆ ಇನ್ನೊಂದು ಪಾತ್ರೆ ಮುಚ್ಚಿಡು. ಅದನ್ನು ಪ್ರಯತ್ನಿಸಿದೆ. ನನ್ನದೇ ಅವಿಷ್ಕಾರವಾದ - ಹೆಪ್ಪು ಹಾಕಿದ ಹಾಲಿನ ಬೋಗುಣಿ ಮೇಲೆ ಭಾರ ಹೇರಿ ನೋಡಿದೆ. ಕುಕರ್ ಒಳಗಡೆ ಹಾಲಿನ ಪಾತ್ರೆ ಇಟ್ಟು ನೋಡಿದೆ. ಉಹುಂ, ಏನು ಮಾಡಿದರೂ ಹಾಲು ಮೊಸರಾಗುತ್ತಿಲ್ಲ. ಕೈ ಚೆಲ್ಲಿ ಛಳಿಗಾಲವಿಡೀ ನಂದಿನಿ ಮೊಸರು ಅಂಗಡಿಯಿಂದ ತಂದು ಬಿಟ್ಟೆ. ನಂದಿನಿ ಮೊಸರು ದಪ್ಪಗೇನೋ ಇತ್ತು, ಆದರೆ ಏನೇನು ಹಾಕುತ್ತಾರೋ ದೇವರಿಗೇ ಗೊತ್ತು. ಈ ವರ್ಷ ಒಂದು ಐಡಿಯಾ ಹೊಳೆಯಿತು. ಅಡಿಗೆ ಮನೆ ಮೂಲೆಯಲ್ಲಿ ...