ಪುಸ್ತಕಗಳ್ಳಿ

 "ಜೀಸಸ್ ,ಮೇರಿ ಮತ್ತು  ಜೋಸೆಫ್!"

 ಇದೇನಿದು? ಸರಿಯಾಗಿ ರಾಮಾ  ಕೃಷ್ಣಾ ಎಂದು ಉದ್ಗರಿಸದೇ  ಇನ್ನೇನೋ ಮರುಳು ರಾಗ ಹೇಳುತ್ತಿದ್ದೇನಲ್ಲ! ನಮ್ಮವರ  ವರ್ತನೆಗಳಿಂದ ಬೇಸತ್ತು ನಾನು ಕನ್ವರ್ಟ್ ಆಗಿಬಿಟ್ಟಿದ್ದೇನಾ  ಎಂದುಕೊಳ್ಳಬೇಡಿ. 

ಈ ಉದ್ಘಾರ  ದಿ ಬುಕ್ ಥೀಫ್ ಎಂಬ ಜರ್ಮನ್ ಪುಸ್ತಕದಿಂದ ಆಯ್ದಿದ್ದು. (ಲೇಖಕರು - ಮಾರ್ಕಸ್ ಝುಸಕ್ ) 

ಆ ಪುಸ್ತಕದಲ್ಲಿಯ ಜನರು ಪದೇಪದೇ ಹೀಗೆಂದೇ  ಉದ್ಗರಿಸುತ್ತಿರುತ್ತಾರೆ. ನಾವು ಹೇಳುತ್ತೇವಲ್ಲ - ಅಯ್ಯೋ ದೇವರೇ, ಅಯ್ಯೋ ಭಗವಂತ, ಹೇ ರಾಮ್ ಅಂತೆಲ್ಲ - ಅದೇ ರೀತಿ.

ಇಷ್ಟು ಸುಶಿಕ್ಷಿತ ಮೃದು ಬೈಗಳಾ - ಪಾಪ ಬಡಪಾಯಿ ಜನ, ಸುಸಂಕೃತ ಬೈಗುಳೆ ಗೊತ್ತಿಲ್ಲ. ಅಥವಾ ಕಷ್ಟವನ್ನೇ ಕಾಣದ ಸಜ್ಜನರು ಎಂದುಕೊಳ್ಳಬೇಡಿ. 

ಈ ಕಥೆಯ ಕಾಲ - ದೇಶ  ಎರಡನೇ ಮಹಾಯುದ್ಧದ ಸಮಯದ ಜರ್ಮನಿ. ಇವರೆಲ್ಲ  ಜರ್ಮನಿಯಲ್ಲಿ ನಾಜಿಗಳ ಮಧ್ಯದಲ್ಲಿ ನರಕಸದ್ರಶ ಜಗತ್ತಿನಲ್ಲಿ ಬದುಕಿದವರು.  ಅರೆ-ಸಾವು ಸಾಯುತ್ತ, ಸುತ್ತ ಮುತ್ತ ಹಿಂಸೆ ನೋಡುತ್ತಾ ಇದ್ದರೂ, ಅದನ್ನು ತಡೆಯಲಾಗದ, ಏನೂ ಮಾಡಲಾಗದ ಅಸಹಾಯಕಟೆಯಲ್ಲಿ ಬದುಕಿದವರು. 

ಕಥಾನಾಯಕಿ ಲೀಸ - ಅವಳೇ  ಪುಸ್ತಕಗಳ್ಳಿ - ಅವಳೊಬ್ಬ  ಪುಟ್ಟ ಮಗು. ಅಣ್ಣ, ತಾಯಿಯರ  ಜೊತೆ ರೈಲಿನಲ್ಲಿ ಪಯಣ ಹೊರಟಿದ್ದಾಳೆ. ಹಸಿವಿನಿಂದ, ರೋಗದಿಂದ, ಅವಳ ಅಣ್ಣ ಅಸುನೀಗುತ್ತಾನೆ. ಹತಾಶಳಾದ ತಾಯಿ ಲಿಸಾಳನ್ನ ದತ್ತಕ್ಕೆ ಕೊಟ್ಟು ಎಲ್ಲೋ ದೂರ ಹೋಗಿ ಬಿಡುತ್ತಾಳೆ. 

ಲಿಸಾಳ  ದತ್ತ ತಂದೆ-ತಾಯಿ ರೋಜಾ ಮತ್ತು ಹ್ಯಾನ್ಸ್. ತಮ್ಮದೇ ಶೈಲಿಯ ಅಕ್ಕರೆಯಲ್ಲಿ  ಲಿಸಾಳನ್ನು ಸಾಕುತ್ತಾರೆ.

ರೋಜಾ "ಹಂದಿ!" ಎಂದು ಬಯ್ಯುತ್ತಲೇ, ಲೀಸಾಳಿಗೆ ಉಣ್ಣಿಸಿ, ತಿನ್ನಿಸಿ, ಸ್ನಾನ ಮಾಡಿಸಿ, ಸ್ವಂತ ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾಳೆ. 

ಹ್ಯಾನ್ಸ್  ಅವಳಿಗೆ ಕಥೆ ಓದಿಹೇಳುತ್ತಾನೆ.  ಅವಳಿಗೂ  ಓದಲು ಕಲಿಸುತ್ತಾನೆ. ಅವಳು ರಾತ್ರಿಯೆಲ್ಲಾ  ದುಃಸ್ವಪ್ನ ದಿಂದ ಬೆಚ್ಚುತ್ತಿದ್ದರೆ  ಅವಳಿಗೆ ಹಾರ್ಮೋನಿಕ ನುಡಿಸಿ ಸಮಾಧಾನ ಮಾಡುತ್ತಾನೆ.

ಇವರಿಬ್ಬರ ಪ್ರೀತಿಯ ಕವಚದಲ್ಲಿಬೆಳೆಯತೊಡಗಿದ  ಲಿಸಾ, ತನ್ನ ಪುಟ್ಟ ಜಗತ್ತಿನಲ್ಲಿ ಮುಳುಗುತ್ತಾಳೆ. 

ಆದರೆ ಒಂದು ದಿನ ಅವರ ಬದುಕಿನಲ್ಲಿ ಸುಂಟರಗಾಳಿ ಮ್ಯಾಕ್ಸ್ ಎಂಬ ವ್ಯಕ್ತಿಯ  ರೂಪದಲ್ಲಿ ಪ್ರವೇಶಿಸುತ್ತದೆ. 

ಮ್ಯಾಕ್ಸ್  ಯಹೂದಿ - ಪೋಲೀಸಿರಿಂದ ತಪ್ಪಿಸಿಕೊಂಡು ಓದಿ ಬಂದಿದ್ದಾನೆ. ಅವನ ಬಗ್ಗೆ  ಜರ್ಮನ್ ಪೊಲೀಸರಿಗೆ ಗೊತ್ತಾದರೆ ಅವನಿಗೆ ಬಂಧನ, ಸಾವು ಕಟ್ಟಿಟ್ಟ ಬುತ್ತಿ. ಜೊತೆಗೆ ಹಾನ್ಸ್  ದಂಪತಿಗಳಿಗೂ ಆಪತ್ತು.  

ಭೂಗತವಾಗಿದ್ದವನು ಆಶ್ರಯ ಸಿಗುವ ನಂಬಿಕೆಯಿಂದ ಈ ಊರಿಗೆ ಬಂದಿದ್ದಾನೆ. ಹಾನ್ಸ್  ಮನೆಯಲ್ಲಿ ಬಚ್ಚಿಟ್ಟುಕೊಳ್ಳಲು.

ಹಿಂದೊಮ್ಮೆ ಯುದ್ಧ  ಕಾಲದಲ್ಲಿ ಮ್ಯಾಕ್ಸ್ ನ ತಂದೆ ಹ್ಯಾನ್ಸ್ ನ ಜೀವ ಉಳಿಸಿರುತ್ತಾನೆ. ಆ ಹಂಗಿನಿಂದ ಹಾನ್ಸ್  ಮ್ಯಾಕ್ಸ್ ಗೆ ಆಶ್ರಯ ಕೊಡುತ್ತಾನೆ. ಅವನನ್ನು ತಮ್ಮ ಮನೆಯ ನೆಲಮಾಳಿಗೆಯಲ್ಲಿ  ಬಚ್ಚಿಡುತ್ತಾನೆ .

ಯಾವುದೇ ಸಮಯದಲ್ಲಿ ಪೊಲೀಸರು ಅಥವಾ ನಾಝಿಗಳು ಬಂದರೆ ಮ್ಯಾಕ್ಸ್ ನ ಜೊತೆ ಇವರೆಲ್ಲರನ್ನು ಬಂಧಿಸುವದು ಸುನಿಶ್ಚಿತ .

ಲೀಸಾ ಸಮಯವಾದಾಗೆಲ್ಲ ನೆಲಮಾಳಿಗೆಗೆ  ಹೋಗಿ, ಮ್ಯಾಕ್ಸ್ ನಿಗೆ ಪುಸ್ತಕಗಳನ್ನು ಓದಿ ಹೇಳುತ್ತಾಳೆ. ಅವನು ಕಾಯಿಲೆ ಬಿದ್ದಾಗ ಅವನ ಆರೈಕೆಯನ್ನೂ ಮಾಡುತ್ತಾಳೆ. 

ಅವನಿಗೆ ಹೊರ ಆಕಾಶದ ವರ್ಣನೆಯನ್ನು ಮಾಡುತ್ತಾಳೆ. ರೋಜಾ ಬೆಳಿಗ್ಗೆ, ಸಂಜೆ ಅವನಿಗೆ ಊಟ ತಿಂಡಿ ತೆಗೆದುಕೊಂಡು ಹೋಗಿ ಕೊಡುತ್ತಾಳೆ. ಹಾನ್ಸ್  ಅವನ ಹೊಲಸಿನ ಬಕೆಟ್ಟನ್ನು ದಿನ ಒಮ್ಮೆ ಹೊರಗೊಯ್ದು ಚೆಲ್ಲುತ್ತಾನೆ. 

ಒಂದು ದಿನ ಲಿಸಾ ಅವನ ಸಲುವಾಗಿ ಬಕೆಟ್ಟಿನಲ್ಲಿ ಹಿಮವನ್ನು ತಂದು, ಅವನಿಗಾಗೇ ಹಿಮ ಮಾನವನನ್ನು ಮಾಡುತ್ತಾಳೆ.

ಆದರೆ  ಹಾನ್ಸ್ ನ ಒಳ್ಳೆತನವೇ ಒಂದು ದಿನ ಅವನನ್ನು ಕಷ್ಟಕ್ಕೆ ಸಿಲಿಕಿಸುತ್ತದೆ. 

ಅಂದು ರಸ್ತೆಯಲ್ಲಿ ನಾಜಿಗಳು ಕೈದಿಗಳ ಮೆರವಣಿಗೆ ಮಾಡುತ್ತಾರೆ.  - ಅರೆಹೊಟ್ಟೆಯ, ಮೈತುಂಬ ಗಾಯ ತುಂಬಿ, ನಡೆಯಲೂ ಆಗದ ಯಹೂದಿ ಕೈದಿಗಳನ್ನು ರಸ್ತೆಯಲ್ಲಿ ಹೊಡೆಯುತ್ತ, ಹೆದರಿಸುತ್ತ ನಡೆಸುತ್ತಾರೆ. ಜನರೆಲ್ಲಾ ಈ ಕರಾಳ ದ್ರಶ್ಯ ನೋಡುತ್ತ ಅಸಹಾಯಕತೆಯಿಂದ ಸುಮ್ಮನಿರುತ್ತಾರೆ. 

ಅವರ ಮಧ್ಯದಲ್ಲಿ ಒಬ್ಬ ಮುದುಕ -  ನಿಲ್ಲಲೂ ಆಗದೆ ಕ್ಷಣಕ್ಷಣಕ್ಕೆ ಬೀಳುತ್ತಿರುತ್ತಾನೆ.ಆ  ಸಂಕಟವನ್ನು  ಹಾನ್ಸ್ ಗೆ ನೋಡಲಾಗುವದಿಲ್ಲ. ಹ್ಯಾನ್ಸ್ , ಅವನ ಕೈಗೆ ಒಂದು ಸಣ್ಣ ತುಂಡು ಬ್ರೆಡ್ಡನ್ನು ಕೊಡುತ್ತಾನೆ. 

ಮರುಕ್ಷಣದಲ್ಲಿ ಪೊಲೀಸರು ಆ ಕೈದಿಯ ಕೈಯಿಂದ ಬ್ರೆಡ್ ಕಸಿದು, ಅವನಿಗೆ ಎಗ್ಗಾಮುಗ್ಗಾ ಹೊಡೆದು, ಹಾನ್ಸ್ ನಿಗೂ  ಲಾಠಿಯಿಂದ  ಹೊಡೆಯುತ್ತಾರೆ.

ಮನೆಗೆ ಬಂದ ಹಾನ್ಸ್  ಗೆ ತೀವ್ರ ಭಯ ಶುರುವಾಗುತ್ತದೆ. ಯಾವ ಕ್ಷಣದಲ್ಲಿ ಪೋಲೀಸರು ಬಂದು ತಮ್ಮ ಮನೆಯಲ್ಲಿ ಅಡಗಿರುವ   ಯಹೂದಿಯನ್ನು ಬಂದಿಸಿ, ತಮ್ಮನ್ನೂ  ಬಂಧಿಸಿ ಎಳೆದೊಯ್ಯುತ್ತಾರೇನೋ ಎಂದು ಹೆದರಿ ನಡುಗುತ್ತಾನೆ. 

ಈ ವಿಷಯ ತಿಳಿದ ಮ್ಯಾಕ್ಸ್ , ತನಗಾಗಿ ಈ ಸಜ್ಜನರಿಗೆ ಸಂಕಟ ಬೇಡ ಎಂದುಕೊಂಡು, ರಾತ್ರಿ ಅವರೆಲ್ಲ ಮಲಗಿದ್ದಾಗ, ಅವರ ಮನೆಯಿಂದ ಹೊರಟು  ಕತ್ತಲೆಯಲ್ಲಿ  ಕರಗಿ ಬಿಡುತ್ತಾನೆ.

ಆದರೆ ಪೊಲೀಸರಿಗೆ ಹಾನ್ಸ್  ಮೇಲೆ ಕೋಪ ಇದೆ. ಅವನು ಯಹೂದಿ ಕೈದಿಗೆ ಕರುಣೆ ತೋರಿಸುವ ಘೋರ ಅಪರಾಧ ಮಾಡಿದ್ದನಲ್ಲ. ನಾಲ್ಕು ದಿನದ ನಂತರ ಪೊಲೀಸರು ಬಂದು, ಹ್ಯಾನ್ಸ್ ನನ್ನು ಸೈನ್ಯಕ್ಕೆ ಸೇರಿಸಲು ಕರೆದುಕೊಂಡು ಹೋಗಿಬಿಡುತ್ತಾರೆ.

ಇದೇ ಸಮಯದಲ್ಲಿ ಲೀಸಾನ ಗೆಳೆಯ ರೂಡಿಯ ತಂದೆಯನ್ನೂ ಸಹ ಬಲವಂತದಿಂದ ಸೈನ್ಯಕ್ಕೆ ಸೇರಿಸುತ್ತಾರೆ. ಅವನ ಅಪರಾಧವೋ - ಮಗ ರೂಡಿಯನ್ನು ಸೈನ್ಯಕ್ಕೆ ಕಳಿಸಿಲು ನಿರಾಕರಿಸಿದ್ದು . 

ಈ ಪುಸ್ತಕದಲ್ಲಿ ಬರುವ ವ್ಯಕ್ತಿಗಳೆಲ್ಲ ಒಂದೆಲ್ಲಾ ಒಂದು ರೀತಿಯ ಪರಿಸ್ಥಿತಿಯ ಬಲಿಪಶುಗಳೇ! ಎಲ್ಲರು ಕಳೆದುಕೊಂಡವರೇ!

ಯಹೂದಿ ಮ್ಯಾಕ್ಸ್ (ಅವನಂತಹ ಲಕ್ಷಗಟ್ಟಲೆ ಜನ),  ಆತ್ಮ ಸಮ್ಮಾನ, ನಂತರ ಕೆಲಸ, ನಂತರ ಸ್ವಾತಂತ್ರ್ಯ,, ಕೊನೆಯಲ್ಲಿ  ಜೀವ ಕಳೆದುಕೊಳ್ಳುತ್ತಾನೆ. ಎಲ್ಲೋ ಕೆಲವು ಜರ್ಮನ್ನರು ಈ ಜನಾಂಗ ದ್ವೇಷವನ್ನು, ಈ ಕ್ರೌರ್ಯವನ್ನು ಬೆಂಬಲಿಸುತ್ತಾರೆ.ಉಳಿದ ಕೆಲವರು    ನಮ್ಮಸಮಸ್ಯೆಯಲ್ಲ ಎಂದುಕೊಂಡು  ಸುಮ್ಮನಿದ್ದುಬಿಡುತ್ತಾರೆ. ಇನ್ನೂ ಹಲವಾರು ಪೋಲೀಸರ, ನಾಝಿಗಳ ಎದುರು ಹಾಕಿಕೊಂಡ ತಾವೂ ಕಷ್ಟದಲ್ಲಿ ಸಿಲುಕುವದು ಬೇಡ ಎಂದು, ಭಯದಿಂದ ಸುಮ್ಮನಿರುತ್ತಾರೆ.

ಲೀಸಾ ತನ್ನ ಅಣ್ಣನನ್ನು ಕಳೆದುಕೊಂಡಳು. ತನ್ನ ತಾಯಿ ಎಲ್ಲಿದ್ದಾಳೋ, ಹೇಗಿದ್ದಳೋ ಗೊತ್ತಿಲ್ಲ (ಅವಳು ಕಮ್ಮುನಿಸ್ಟ್  ಬಹುಶ:). ನಂತರ ಅವಳಿಗೆ ಸುರಕ್ಷಿತತೆಯನ್ನು ಕೊಟ್ಟ ಅವಳ ಸಾಕು ತಂದೆ ಪಪ್ಪಾಎಲ್ಲಿದ್ದಾನೋ, ಎಂದು ವಾಪಸ್ ಬರುತ್ತಾನೋ ಗೊತ್ತಿಲ್ಲ.

ಪದೇ ಪದೇ ಅವರಊರಿನಲ್ಲಿ ಬಾಂಬ್ ದಾಳಿ ಆಗುತ್ತಾ ಇರುತ್ತದೆ. ಆಗೆಲ್ಲ ಜನರೆಲ್ಲಾ ಯಾರದ್ದಾದರೂ ಬೇಸ್ಮೆಂಟ್ ಗೆ ಹೋಗಿ ಅಲ್ಲಿ ಜೀವ ಕೈಯಲ್ಲಿ ಹಿಡಿದ ಕುಳಿತಿರುತ್ತಾರೆ. 

ಇಷ್ಟೆಲ್ಲಾ ಆಗುತ್ತಿರುವದು ಒಂದು ವ್ಯಕ್ತಿಯ ಹುಚ್ಚು ಆಸೆಯಿಂದ. 

ಇನ್ನೊಂದು ವೈಶಿಷ್ಟ್ಯವೆಂದರೆ ಈ ಕತೆಯ ನಿರೂಪಕಿ ಲೀಸ ಅಲ್ಲ. ನಿರೂಪಕ ಮೃತ್ಯು - ಯಮ. ಮೃತ್ಯು ಕತೆ ಹೇಳುತ್ತಾನೆ. ಹೇಗೆ ಆ ಕಾಲದಲ್ಲಿ ಅವನು ದಿನ ನಿತ್ಯ ಸಾವಿರಾರು ಜನರ ಆತ್ಮವನ್ನು, ಜೀವವನ್ನು ಬಾಚಿ ಕೊಂಡುಯ್ಯುತ್ತಾನೆ. ಹೇಗೆ ಸಮಯ ಕಳೆದಂತೆ ಬಹಳಷ್ಟು ಜನ ಅವನನ್ನೇ ಗೋಗರೆಯುತ್ತ ಬಾ ಎಂದು ಕರೆಯುತ್ತಾರೆ - ದಯವಿಟ್ಟು ನನ್ನನ್ನು ಕೊಂಡೊಯ್ಯಪ್ಪ, ಇರಲಾರೆ, ಈ ನರಕದಲ್ಲಿಎನ್ನುತ್ತಾರೆ. 

ಅವನ ಒಂದು ಮಾತು ಮನ ತಟ್ಟುತ್ತದೆ. ತನಗಿಲ್ಲದ ಒಂದು ವಿಷಯ ಮನುಜರಿಗಿದೆ - ಅವರ ಬದಕು,ಬವಣೆ ಒಂದು ದಿನ ಕೊನೆಯಾಗುತ್ತದೆ.

ಇನ್ನು ಒಂದು ಸಂದರ್ಭ - ಲೀಸಾ ತನ್ನ ಗೆಳೆಯ ರೂಡಿ ಜೊತೆ ಒಮ್ಮೊಮ್ಮೆ ಮೇಯರ್ ಮನೆಗೆ ಹೋಗಿ ಅವರ ಪುಸ್ತಕಾಲಯದಿಂದ ಪುಸ್ತಕ ಆರಿಸಿ ಅದನ್ನು ಕದ್ದು ಮನೆಗೆ ತಂದು ಓದುತ್ತಾಳೆ. 

ಬಾಂಬ್ ಹೆದರಿಕೆಯಿಂದ ಅಕ್ಕಪಕ್ಕದ ಮನೆಯ ಜನರೆಲ್ಲಾ ಸೇರಿ ಒಂದು  ನೆಲ ಮಹಡಿಯಲ್ಲಿ ಅವಿತು ಕುಳಿತಿದ್ದಾಗ, ಆ ಕದ್ದು ತಂದ ಪುಸ್ತಕ ಓದಿ ಜನರ  ಭಯ, ದುಗುಡ ಕಡಿಮೆ ಮಾಡುತ್ತಾಳೆ. 

ಆದರೂ ಮುಂದೆ ಒಂದು ದಿನ ಅವಳಿಗೂ  ಬಹಳ ಹತಾಶೆಯಾಗಿ ಪುಸ್ತಕವನ್ನು ಹರಿದು ಚೂರು ಚೂರು ಮಾಡುತ್ತಾಳೆ. ಈ ಶಬ್ದ - ಈ ಅಕ್ಷರಗಳಿಂದಲೇ ಹಿಟ್ಲರ್ ಜನರನ್ನು ಮೋಡಿ ಮಾಡಿ, ಇಷ್ಟೆಲ್ಲಾ  ನರ ಸಂಹಾರಕ್ಕೆ ಕಾರಣನಾದ. ಇವೆಲ್ಲಕ್ಕೂ ಈ ಶಬ್ದಗಳೇ ಕಾರಣ ಎಂದು ಪುಸ್ತಕವನ್ನೇ ಹರಿದು ಚೂರು ಮಾಡಿಬಿಡುತ್ತಾಳೆ.

ಭಯದಿಂದ ಆವೃತ್ತವಾದ ದೇಶದ ಜನರ ಮನಗಳ ಕಥೆ ಇದು.

 


Comments

Popular posts from this blog

ಹೂಗಳು

ಎಮ್ಮೆ

ಸೇಲ್